ನವದೆಹಲಿ: ಆಡಳಿತಾರೂಢ ಪಕ್ಷದ ಶಾಸಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ತಕ್ಷಣ ವಿಶ್ವಾಸಮತ ಯಾಚನೆಗೆ ಸಮ್ಮತಿಸುವುದು ಒಂದಿಡೀ ಸರ್ಕಾರದ ಪತನಕ್ಕೆ ದಾರಿ ಮಾಡಿಕೊಟ್ಟಂತೆ. ಇಂಥ ಸಂದರ್ಭಗಳಿಗೆ ರಾಜ್ಯಪಾಲರು ಅವಕಾಶ ನೀಡಬಾರದು.ಈ ವಿಚಾರಗಳಲ್ಲಿ ಮತ್ತಷ್ಟು ಜವಾಬ್ದಾರಿಯುತವಾಗಿರಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
2022ರ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು, ಅವಿಭಜಿತ ಶಿವಸೇನೆಯಲ್ಲಿ ಉಂಟಾದ ಬಂಡಾಯದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ವಿಚಾರಣೆ ನಡೆಸಿದೆ.
ಈ ವೇಳೆ ಶಾಸಕರ ನಡುವೆ ವಿವಿಧ ವಿಚಾರಗಳಿಗೆ ಭಿನ್ನಾಭಿಪ್ರಾಯ ಬರುತ್ತದೆ. ಬೆಂಬಲ ಹಿಂಪಡೆಯಲು ಮುಂದಾಗಬಹುದು. ಆದರೆ, ತಕ್ಷಣ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಅನುಮತಿಸಿದರೆ, ಪಕ್ಷ ತೊರೆಯುವವರ ಪ್ರಮಾಣ ಹೆಚ್ಚುತ್ತದೆ. ಇದರಿಂದ ಸರ್ಕಾರ ಪತನಗೊಂಡು ಜನರು ಆರಿಸಿದ ಸರ್ಕಾರ ಮುಳುಗುವ ಮೂಲಕ ಪ್ರಜಾಪ್ರಭುತ್ವದ ಶೋಚನೀಯ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದೆ.