Advertisement

ಮೂಲಗೇಣಿದಾರರಿಗೆ ನ್ಯಾಯ ಒದಗಿಸಿ

03:40 AM Oct 21, 2018 | |

1968-72ರ ಅವಧಿಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾನೂನು “ಉಳುವವನೇ ಹೊಲದೊಡೆಯ’ ಎಂಬ ನೆಲೆಯಲ್ಲಿ ಚಾಲಗೇಣಿ ಪದ್ಧತಿಯನ್ನು ನಿರ್ಮೂಲನ ಮಾಡುವಾಗ ಮೂಲಗೇಣಿ ಒಕ್ಕಲುಗಳ ಬಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಈ ಪದ್ಧತಿ ಹಾಗೆಯೇ ಉಳಿದುಕೊಂಡಿತು. ಇದರಿಂದಾಗಿ “ಒಕ್ಕಲುತನ’ ನಿರ್ಮೂಲನೆಯಲ್ಲಿ ತಾರತಮ್ಯವನ್ನು ತೋರಿಸಿದಂತಾಯ್ತು. 

Advertisement

ಕರಾವಳಿ ಜಿಲ್ಲೆಗಳಲ್ಲಿ ಸ್ವಾತಂತ್ರ್ಯಪೂರ್ವದಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಸರಕಾರಿ ಜಮೀನಿನ ಸಂಪನ್ಮೂಲವನ್ನು ಕಂದಾಯ ರೂಪದಲ್ಲಿ ಕ್ರೋಡೀಕರಿಸಲು ಆಯಾಯ ಊರುಗಳಲ್ಲಿರುವ ಸಂಘ ಸಂಸ್ಥೆ, ಉದಾ: ದೇವಸ್ಥಾನ, ಚರ್ಚು, ಮಸೀದಿಗಳು ಹಾಗೂ ಇತರ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಿತ್ತು. ಕಂದಾಯವನ್ನು ನಿರ್ಧರಿಸಲು ಜಮೀನನ್ನು ಎರಡು ರೀತಿಯಲ್ಲಿ ವಿಂಗಡಿಸಿ ನೀರಿನಾಶ್ರಯವಿದ್ದು ಬತ್ತ, ಕಬ್ಬು ಮುಂತಾದ ಬೆಳೆಗಳನ್ನು ಬೆಳೆಯುವ ಜಮೀನಿಗೆ ಅದರಲ್ಲಿ ಬೆಳೆಯುವ ಫ‌ಸಲಿನ ಆಧಾರದಲ್ಲಿ ವರ್ಷಂಪ್ರತಿ ಫ‌ಸಲಿನಲ್ಲಾಗುವ ಏರುಪೇರುಗಳನ್ನು ಗಮನಿಸಿ ಗೇಣಿಯನ್ನು ನಿಶ್ಚಯಿಸುವ ಪದ್ಧತಿಗೆ ಚಾಲಗೇಣಿ/ ಚಾಲ್ತಿಗೇಣಿ ಎಂದೂ ಇದನ್ನು ವರ್ಷಕ್ಕೊಮ್ಮೆ ಪರಿಷ್ಕರಿಸುವ ಅವಕಾಶವನ್ನು ನೀಡಿದ್ದರು. ಒಣಭೂಮಿಯಲ್ಲಿ ವಕ್ಕಲು ಕಷ್ಟಪಟ್ಟು ಅದರಲ್ಲಿ ಇತರ ವಾಣಿಜ್ಯ ಬೆಳೆಗಳನ್ನು, ಮನೆ ಕಟ್ಟಡಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಿ ಶಾಶ್ವತವಾಗಿ ಅದಕ್ಕೆ ಒಂದು ನಿಶ್ಚಿತ ಗೇಣಿಯನ್ನು ನಿರ್ಧರಿಸಲಾಗುತ್ತಿತ್ತು. ಈ ನಿಶ್ಚಿತ ಗೇಣಿಯನ್ನು ಪರಿಷ್ಕರಿಸುವ ಹಕ್ಕುಗಳಿರುವುದಿಲ್ಲ. ಅಲ್ಲದೆ ಅದರ ಒಡೆತನ ಒಕ್ಕಲಿಗೆ / ಅನುಭೋಗದಾರನಿಗೆ ಇರುತ್ತಿತ್ತು. ಈ ಪದ್ಧತಿಗೆ “ಮೂಲಗೇಣಿ ಪದ್ಧತಿ’ ಎಂದು ಹೆಸರು. ಇದರಲ್ಲಿ ಮೂಲಿದಾರನಿಗೆ ಗೇಣಿಯನ್ನು ಮಾತ್ರ ವಕ್ಕಲುಗಳಿಂದ ಪಡೆದು ಸರಕಾರಕ್ಕೆ ಸಂದಾಯವಾಗಬೇಕಾಗಿದ್ದ ಕಂದಾಯವನ್ನು ಜಮಾಯಿಸುವ ಅಧಿಕಾರ ಮಾತ್ರ ಇತ್ತು. 

ಬ್ರಿಟಿಷರ ಕಾಲದಿಂದಲೂ ಈ ಮೇಲಿನ ಸರಕಾರಿ ಜಮೀನನ್ನು ಯಾವುದೇ ಮೂಲಿದಾರ ಉದಾ: ಮಠ, ಮಂದಿರ, ಚರ್ಚು, ಮಸೀದಿಗೆ ಸಂಬಂಧಿಸಿದ ಭೂಮಿಯನ್ನು ಹಣ ಕೊಟ್ಟು ಕ್ರಯ ಸಾಧನೆ ಮಾಡಿಕೊಂಡದ್ದಲ್ಲ. ಆದರೆ ಈಗ ಶೇ. 90ರಷ್ಟು ಮೂಲಗೇಣಿ ಒಕ್ಕಲುಗಳ ಭೂಮಿ ಚಿಕ್ಕ ಚಿಕ್ಕ ತುಂಡಾಗಿ, ಕ್ರಯಸಾಧನೆಯಿಂದ ಪಡೆದುಕೊಂದ್ದಾಗಿರುತ್ತದೆ. ಒಣಭೂಮಿಯ ಮೂಲಗೇಣಿಯನ್ನು ಮಾತ್ರ ಸಂಗ್ರಹಿಸುವ ಜವಾಬ್ದಾರಿ ಇರುವುದರಿಂದ ಅವರನ್ನು “ಮೂಲಿದಾರ’ ಎಂದು ಕರೆದರು ವಿನಃ ಆ ಭೂಮಿಯ ಒಡೆತನ ಅವರಿಗೆ ಇರಲಿಲ್ಲ. 

ಆಗ ಈಗಿನಂತೆ RTC ಪದ್ಧತಿಯೂ ಇರಲಿಲ್ಲ. ಪ್ರಸ್ತುತ ಗ್ರಾಮ, ಪಟ್ಟಣಗಳು ಬೆಳೆದಂತೆ ಭೂಮಿಯ ಬೆಲೆಯೂ ಏರಿರುವುದನ್ನು ನೋಡಿ ಮೂಲಿದಾರರು ಮೂಲಗೇಣಿ ಭೂಮಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿದ್ದಾರೆ. ವಂಶ ಪಾರಂಪರ್ಯವಾಗಿ ಅನುಭೋಗಿಸುವ ಹಕ್ಕಿನ ಈ ಮೂಲಗೇಣಿ ಭೂಮಿಯನ್ನು ಕಷ್ಟಪಟ್ಟು ಅಭಿವೃದ್ಧಿಪಡಿಸಿ, ಮನೆ ಕಟ್ಟಡಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. 1968-72ರ ಅವಧಿಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾನೂನು “ಉಳುವವನೇ ಹೊಲದೊಡೆಯ’ ಎಂಬ ನೆಲೆಯಲ್ಲಿ ಚಾಲಗೇಣಿ ಪದ್ಧತಿಯನ್ನು ನಿರ್ಮೂಲನ ಮಾಡುವಾಗ ಮೂಲಗೇಣಿ ಒಕ್ಕಲುಗಳ ಬಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಈ ಪದ್ಧತಿ ಹಾಗೆಯೇ ಉಳಿದುಕೊಂಡಿತು. ಇದರಿಂದಾಗಿ “ಒಕ್ಕಲುತನ’ ನಿರ್ಮೂಲನೆಯಲ್ಲಿ ತಾರತಮ್ಯವನ್ನು ತೋರಿಸಿದಂತಾಯ್ತು. 

2006ರಲ್ಲಿ ಅವಿಭಜಿತ ಜಿಲ್ಲೆ (ಮಂಗಳೂರು+ಉಡುಪಿ) ಮೂಲಗೇಣಿದಾರರು ತಾವು ನೀಡಬೇಕಾಗಿದ್ದ ಗೇಣಿಯ 500/1000 ಪಟ್ಟು ಹಣವನ್ನು ಸರಕಾರಕ್ಕೆ ಪಾವತಿಸಿ, ಮೂಲಿದಾರರಿಂದ ಬಿಡುಗಡೆ ಪಡೆಯುವ ಸಲುವಾಗಿ ಒಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ(ರಿ.) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ನ್ಯಾಯ ಒದಗಿಸುವ ನೆಲೆಯಲ್ಲಿ ಹೋರಾಟ ಮಾಡಿ, ಕರ್ನಾಟಕ ಸರಕಾರದ ವಿಧಾನಸಭೆಯಿಂದ ವಿಧೇಯಕವನ್ನು ಮಂಡಿಸಿ ರಾಷ್ಟ್ರಪತಿಯವರಿಂದಲೂ ಪರಾಮರ್ಶಿಸಿದ ಬಳಿಕ ಕಾನೂನಾಗಿ ಜಾರಿಯಾಗಿಸಿತ್ತು. 

Advertisement

6-10-2016ರಂದು ಈ ಬಗ್ಗೆ ನಿಯಮಾವಳಿಗಳನ್ನು ರಚಿಸಿ ರಾಜಪತ್ರದಲ್ಲಿ ದಾಖಲಿಸಿ, ಸಾರ್ವಜನಿಕ ಆಕ್ಷೇಪಣೆಗೆ ಅವಕಾಶವನ್ನು ನೀಡಿದ ನಂತರ ಯಾವುದೇ ಆಕ್ಷೇಪಣೆಗಳಿಲ್ಲದ್ದನ್ನು ಪರಿಗಣಿಸಿ 7-11-2016ರಿಂದ ಕಾನೂನಾಗಿ ಜಾರಿಗೊಳಿಸಲು ಸದ್ರಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿತ್ತು. ಆದರೆ 2016ರ ಡಿಸೆಂಬರ್‌ನಲ್ಲಿ ಕೆಲ ಸ್ಥಾಪಿತ ಹಿತಾಸಕ್ತಿಯುಳ್ಳ ಮೂಲಿದಾರರು ಕಾನೂನನ್ನು ಜಾರಿಗೊಳಿಸದೆ ಅನೂರ್ಜಿತಗೊಳಿಸುವಂತೆ ಹೈಕೋರ್ಟಿಗೆ ರಿಟ್‌ ಅರ್ಜಿಯನ್ನು ಸಲ್ಲಿಸಿತು. ಮಾನ್ಯ ನ್ಯಾಯಾಧೀಶರು ಉಭಯತ್ರರ ವಾದ ಪ್ರತಿವಾದಗಳನ್ನು ಲಿಖೀತ ರೂಪದಲ್ಲಿ ಪಡೆದು, ಈ ವಿಷಯಕ್ಕೆ ಸಂಬಂಧಿಸಿ 11,000 ಖಟ್ಲೆಗಳು ಬಾಕಿಯರು ವುದನ್ನೂ ಮನ ಗಂಡು ಹಾಗೂ ಸಾಮಾಜಿಕ ನ್ಯಾಯ ಒದಗಿಸುವ ಇಚ್ಛೆಯಿಂದ ರಿಟ್‌ ಅರ್ಜಿಗೆ ಸ್ಟೇಯನ್ನು ನೀಡದೆ “ತಾತ್ಕಾಲಿಕವಾಗಿ ಯಥಾಸ್ಥಿತಿ’ಯನ್ನು ಕಾಪಾಡುವಂತೆ ಆದೇಶಿಸಿರುವುದು ತೊಂದರೆಗೆ ಕಾರಣವಾಯಿತು. ಅರ್ಜಿಗಳನ್ನು ಪಡೆದುಕೊಂಡಲ್ಲಿ ಲಕ್ಷಗಟ್ಟಲೆ ಸಂತ್ರಸ್ತರು ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಸರಕಾರಕ್ಕೆ ಇದರ ನೈಜ ಚಿತ್ರಣ ದೊರಕುತ್ತಿತ್ತು.

2006ರಲ್ಲಿ ಸರಕಾರ ಈ ಕಾನೂನು ಜಾರಿಗೊಳಿಸಲು ಮುಂದಾಗಿತ್ತು. ಆಗ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿದ್ದರು. ಇದೀಗ ಅವರೇ ಮುಖ್ಯಮಂತ್ರಿಯಾವುದರಿಂದ ಲಕ್ಷಾಂತರ ಮೂಲಗೇಣಿ/ಒಳ ಮೂಲಗೇಣಿ ಒಕ್ಕಲುಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡುವರೇ ಹೈಕೋರ್ಟಿನಲ್ಲಿದ್ದ “ರಿಟ್‌’ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಕಾನೂನನ್ನು ಜಾರಿಗೊಳಿಸಿದರೆ ಸರಕಾರಕ್ಕೂ ನೋಂದಾವಣಿ ಪ್ರಕ್ರಿಯೆಯಿಂದಾಗಿ ಖಜಾನೆಗೆ ಹಣ ಬರುತ್ತದೆ. ಮೂಲಿದಾರರು 500/1000 ವರ್ಷಗಳಲ್ಲಿ ಪಡೆಯಲಿದ್ದ ಗೇಣಿ ಒಂದೇ ಕಂತಿನಲ್ಲಿ ಮುಂಚಿತವಾಗಿ ಸಿಗುತ್ತದೆ. ಅಲ್ಲದೆ ಲಕ್ಷಾಂತರ ಮೂಲಗೇಣಿ/ಒಳಮೂಲಗೇಣಿ ಒಕ್ಕಲುಗಳಿಗೆ ತಮ್ಮ ಜಮೀನಿನ ಸಂಪೂರ್ಣ ಹಕ್ಕು ಸಿಗುತ್ತದೆ ಹಾಗೂ ಕೋರ್ಟಿನಲ್ಲಿರುವ ಲಕ್ಷಾಂತರ ಖಟ್ಲೆಗಳು ಅಂತ್ಯ ಕಾಣುತ್ತವೆ. ಹೀಗಾಗಿ ಸರಕಾರ ಈ ನಿಟ್ಟಿನಲ್ಲಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗಿ ನ್ಯಾಯಾಲಯದಲ್ಲಿರುವ ರಿಟ್‌ ಅರ್ಜಿ ಗಳನ್ನು ಆದ್ಯತೆಯಲ್ಲಿ ಖುಲಾಸೆಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು.

ಕೆ. ದಾಮೋದರ ಐತಾಳ್‌

Advertisement

Udayavani is now on Telegram. Click here to join our channel and stay updated with the latest news.

Next