Advertisement

ಅರ್ಹರಿಗೆ ನ್ಯಾಯ ಒದಗಿಸಿ

09:38 PM Mar 23, 2019 | Team Udayavani |

ದಾವಣಗೆರೆ: ಸದಾ ಸ್ವಸ್ಥ ನಾಗರಿಕ ಸಮಾಜಕ್ಕೆ ಪ್ರಾಸಿಕ್ಯೂಷನ್‌ ಅತ್ಯಗತ್ಯ ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕ ಜಿ.ಎಚ್‌. ಅಮೃತ್‌ ಕುಮಾರ್‌ ಪ್ರತಿಪಾದಿಸಿದ್ದಾರೆ.

Advertisement

ಗುರುವಾರ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ವಲಯ ಪೊಲೀಸ್‌, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಗಣಿ ಮತ್ತು ಭೂ ವಿಜ್ಞಾನಗಳ ಇಲಾಖೆ, ಅಬಕಾರಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಒಂದು ದಿನದ ವಲಯ ಮಟ್ಟದ ಕಾರ್ಯಾಗಾರ(ಎನ್‌ಡಿಪಿಎಸ್‌ ಮತ್ತು ಎಂಎಂಆರ್‌ಡಿ/ಕೆಎಂಎಂಸಿಆರ್‌) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಅಭಿಯೋಜಕರು ಅತೀ ಸಮರ್ಥವಾಗಿ ವಾದ ಮಂಡನೆ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಅಭಿಯೋಜಕರು ಅರ್ಹರಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಎಲ್ಲಾ ಇಲಾಖೆಯವರು ಸರ್ಕಾರಿ ಅಭಿಯೋಜಕರ ಬಳಿ ಕೆಲಸ-ಕಾರ್ಯಕ್ಕೆ ಬರುವ ಹಿನ್ನೆಲೆಯಲ್ಲಿ ಪ್ರತಿ ಇಲಾಖೆಯ ಮಾಹಿತಿ, ಕಾನೂನು-ಕಟ್ಟಳೆ ಎಲ್ಲವನ್ನೂ ಚೆನ್ನಾಗಿ ತಿಳಿದುಕೊಂಡಿರಬೇಕು. ತಮ್ಮ ಪ್ರಕಾರ ಪ್ರಾಸಿಕ್ಯೂಷನ್‌ ಅತ್ಯಂತ ಪವಿತ್ರ ವೃತ್ತಿ. ಆ ಮೂಲಕ ನ್ಯಾಯ ದೊರಕಿಸಿಕೊಡುವ ಜೊತೆಗೆ ಸ್ವಸ್ಥ ನಾಗರಿಕ ಸಮಾಜ ನಿರ್ಮಾಣಕ್ಕೂ ಕಾರಣೀಭೂತರಾಗುವ ಹಿನ್ನೆಲೆಯಲ್ಲಿ ವೃತ್ತಿಯ ಬಗ್ಗೆ ಗೌರವ ಮತ್ತು ಧನ್ಯತಾಭಾವ ಹೊಂದಿರಬೇಕು ಎಂದು ತಿಳಿಸಿದರು. 

ನ್ಯಾಯಾಲಯದಲ್ಲಿನ ಕಾರ್ಯ-ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ನ್ಯಾಯಾಧೀಶರ ಚಿಂತನಾಶೈಲಿ ಅರ್ಥ
ಮಾಡಿಕೊಂಡು ವಾದ ಮಂಡನೆ ಮಾಡಬೇಕು. ಆ ರೀತಿ ಮಾಡುವ ಮೂಲಕ ಒಳ್ಳೆಯ ಫಲಿತಾಂಶ ಪಡೆಯಲಿಕ್ಕೆ ಸಾಧ್ಯ
ಎಂದು ತಿಳಿಸಿದರು.

ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಅಗತ್ಯ ಹೆಚ್ಚಾಗಿದೆ ಎಂದರೆ ನೈತಿಕತೆ ಕುಸಿದಿದೆ ಎಂದರ್ಥ. ಪೊಲೀಸ್‌ ಇಲಾಖೆ ಮತ್ತು ಪ್ರಾಸಿಕ್ಯೂಷನ್‌ ಸಮನ್ವಯತೆಯಿಂದ ಕೆಲಸ ಮಾಡಬೇಕು. ಒಂದೊಮ್ಮೆ ಆ ರೀತಿ ಮಾಡದೇ ಹೋದಲ್ಲಿ ಅಪರಾಧಿಗಳು, ಸಮಾಜಘಾತುಕ ಶಕ್ತಿಗಳು ಲಾಭ ಪಡೆಯುವರು ಎಂದು ನುಡಿದರು.

Advertisement

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್‌ ಜಿ., ಮಾತನಾಡಿ, ಈಚೆಗೆ ಮಾದಕದ್ರವ್ಯ ಜಾಲ ಹರಡುವ ಷಡ್ಯಂತ್ರ ನಡೆಸುವ ಮೂಲಕ ಭಾರತದ ಸಾಮರ್ಥ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಮಾದಕ ದ್ರವ್ಯ ನಾಗರಿಕ ಸಮಾಜದ ಕ್ಯಾನ್ಸರ್‌ ಇದ್ದಂತೆ. ಅದನ್ನ ಮೂಲೋತ್ಪಾಟನೆ ಮಾಡಬೇಕಿದೆ. ಪೊಲೀಸ್‌, ಪ್ರಾಸಿಕ್ಯೂಷನ್‌ ಮೇಲೆ ರಾಜಕೀಯ ಒಳಗೊಂಡಂತೆ ಇತರೆ
ಒತ್ತಡ ಇರುತ್ತದೆ. ಆ ನಡುವೆಯೂ ಎರಡೂ ಇಲಾಖೆ ಅತಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಾತನಾಡಿ, ಪೊಲೀಸ್‌ ಮತ್ತು ಪ್ರಾಸಿಕ್ಯೂಷನ್‌ ಒಟ್ಟಾಗಿ ಕೆಲಸ ಮಾಡುವ ಮೂಲಕ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.
 
ನ್ಯಾಯಾಲಯದಲ್ಲಿ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿ ವಾದ ಮಂಡನೆಯ ಅಗತ್ಯತೆಯೂ ಇದೆ. ಈಚೆಗೆ ಶಿಕ್ಷೆಯ ಪ್ರಮಾಣ ಶೇ.3 ರಿಂದ 5 ರಷ್ಟು ಪ್ರಮಾಣದಲ್ಲಿದೆ. ಸಾಕ್ಷಿಗಳು ತದ್ವಿರುದ್ಧವಾಗಿ ನಡೆದುಕೊಳ್ಳಲು ಈ ಅಂಶವೂ ಕಾರಣ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮಾದಕ ವಸ್ತುಗಳ ಸೇವನೆ ಕೇವಲ ಒಬ್ಬರ ಮೇಲೆ ಮಾತ್ರ ಪರಿಣಾಮ ಉಂಟು ಮಾಡುವದಿಲ್ಲ. ಸಮಾಜದ ಮೇಲೆಯೂ
ಉಂಟು ಮಾಡುತ್ತರೆ. ಈ ವರ್ಷದ ಮೊದಲ ಎರಡು ತಿಂಗಳಲ್ಲಿ 7-8 ಪ್ರಕರಣ ಪತ್ತೆ ಹಚ್ಚಿ, ಜಾಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮಾದಕ ವಸ್ತುಗಳ ದಂಧೆಯಲ್ಲಿ ಸಿಕ್ಕಿ ಬಿದ್ದಾಗ ಯಾವುದೇ ಅನುಕಂಪ ತೋರಬಾರದು ಎಂದರು. 

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌. ನಾಗಶ್ರೀ, ಹಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶ ಸಾಬಪ್ಪ,
ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌, ಸರ್ಕಾರಿ ಅಭಿಯೋಜಕ ಎಸ್‌.ವಿ. ಪಾಟೀಲ್‌, ಹಿರಿಯ ಕಾನೂನು
ಅಧಿಕಾರಿ ಕೆ.ಜಿ. ಕಲ್ಪನಾ, ಟಿ. ನಾಗರಾಜ್‌, ವಿ. ಕೋದಂಡರಾಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next