ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯ ಮುಗಿಸಿ, ಪಂಚನಾಮೆ ನಡೆಸಿ ಶನಿವಾರ ಸಂಜೆಯೊಳಗೆ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ವರದಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ ಹಾನಿ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ರೊಂದಿಗೆ ಸಭೆ ನಡೆಸಿ ಮಾತನಾಡಿದರು. ಹಾನಿಯಾದ ಪ್ರತಿ ಮನೆಗಳಿಗೆ ತಹಶೀಲ್ದಾರ್‌ರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಪಂಚನಾಮೆ ನಡೆಸಬೇಕು. ಮನೆಯ ಹತ್ತಿರದ ಫೋಟೋ ತೆಗೆದು ಕಳುಹಿಸಬೇಕು. ಪರಿಹಾರ ಪಾವತಿಸಿದ ಕುರಿತಂತೆ ಜಿಲ್ಲಾಧಿಕಾರಿಗಳ ಮೂಲಕ ಶನಿವಾರ ಸಂಜೆಯೊಳಗಾಗಿ ನನಗೆ ವರದಿ ಕಳುಹಿಸಬೇಕೆಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖಾ ಕಾರ್ಯನಿರ್ವಾಹಕ ಅಭಿಯಂತರರು ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳ ಸರ್ವೇ ಕಾರ್ಯವನ್ನು ನಾಳೆಯೊಳಗಾಗಿ ಪೂರ್ಣಗೊಳಿಸಿ ಮಾಹಿತಿ ಸಲ್ಲಿಸಬೇಕು. ಮಳೆಯಿಂದ ಯಾವುದಾದರೂ ರಸ್ತೆಗಳು ಸಂಪರ್ಕ ಕಡಿತಗೊಂಡರೆ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ದುರಸ್ತಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿಪಂ ಸಿಇಒ ರಮೇಶ ದೇಸಾಯಿ ಹಾಗೂ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು, ಅತಿವೃಷ್ಟಿಯಿಂದ ಉಂಟಾಗಬಹುದಾದ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಗ್ರಾಮೀಣ ಹಾಗೂ ನಗರಪ್ರದೇಶ, ನದಿ, ಹಳ್ಳ ಹಾಗೂ ಕೆರೆಪಾತ್ರಗಳಲ್ಲಿರುವ ಗ್ರಾಮಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಉಸ್ತುವಾರಿ ಕಾರ್ಯದರ್ಶಿಗಳಿಗೆ ವಿವರಿಸಿದರು.
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಏಳು ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿ ಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅತಿವೃಷ್ಟಿ ನೆರೆ ಸಂಭವಿಸಿ ತೊಂದರೆಗೆ ಸಿಲುಕುವ ಜನರ ರಕ್ಷಣೆಗಾಗಿ ಗೃಹ ರಕ್ಷಕ ಹಾಗೂ ಅಗ್ನಿಶಾಮಕ ದಳ ಹಾಗೂ ನುರಿತ ತಂಡಗಳ ರಚನೆ ಮಾಡಿ ರಕ್ಷಣಾ ಸಾಮಗ್ರಿಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಳಜಿ ಕೇಂದ್ರಗಳ ತೆರೆಯಲು ಈಗಾಗಲೇ ಕಟ್ಟಡಗಳನ್ನು ಗುರುತಿಸಿಕೊಳ್ಳಲಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಆಹಾರ ಪೂರೈಕೆ ಸೇರಿದಂತೆ ಅಗತ್ಯ ನೆರವು ಒದಗಿಸಲು ತಂಡಗಳನ್ನು ರಚಿಸಲಾಗಿದೆ. ಅತಿವೃಷ್ಟಿ ಉಂಟಾದರೆ ನೆರೆಯಿಂದ ಜಿಲ್ಲೆಯ 144 ಗ್ರಾಮಗಳು ತೊಂದರೆಗೊಳಗಾಗಬಹುದೆಂದು ಗುರುತಿಸಲಾಗಿದೆ. ಈ ಗ್ರಾಮಗಳ ಜನರಿಗಾಗಿ ಕಾಳಜಿ ಕೇಂದ್ರ ತೆರೆಯಲು ಶಾಲಾ ಕಟ್ಟಡ ಹಾಗೂ ಸಮುದಾಯ ಭವನ ಸೇರಿದಂತೆ 151 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಉಪವಿಭಾಗಾಧಿಕಾರಿ ಡಾ| ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್ ಶಂಕರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ ಹಾಗೂ ನೆರೆ ಹಾವಳಿ ಉಸ್ತುವಾರಿಗಾಗಿ ತಾಲೂಕಾ ನೋಡಲ್ ಅಧಿಕಾರಿಗಳಾಗಿ ನೇಮಕವಾಗಿರುವ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು