ನವಲಗುಂದ: ಬೆಣ್ಣೆಹಳ್ಳ, ಹಂದಿಗನಹಳ್ಳ ಹಾಗೂ ತುಪ್ಪರಿಹಳ್ಳಗಳಲ್ಲಿ ಸತತ ಮಳೆಯಿಂದ ಪ್ರವಾಹ ಹೆಚ್ಚಾಗಿ ಹೆಸರು, ಈರುಳ್ಳಿ, ಹತ್ತಿ, ಮೆಣಸಿನಕಾಯಿ, ಗೋವಿನಜೋಳ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಒತ್ತಾಯಿಸಿದರು.
ಗುಡಿಸಾಗರದಿಂದ ಕೊಂಗವಾಡ ಗ್ರಾಮದ ವರೆಗೆ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಹಾಗೂ ರೈತರ ಜೊತೆ ಟ್ರಾಕ್ಟರ್ ಚಲಾಯಿಸುತ್ತಾ ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ, ತಡಹಾಳ ಹಾಗೂ ಕೊಂಗವಾಡದವರೆಗೆ ಹಾನಿಯಾದ ಬೆಳೆ ಹಾಗೂ ಬಿದ್ದ ಮನೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಎಲ್ಲ ಗ್ರಾಮಗಳಲ್ಲಿ ನೀರು ಬಂದಿರುವುದರಿಂದ ಭಾಗಶಃ ಸ್ಥಳಾಂತರಿಸಬೇಕಾಗಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡಿಲ್ಲ. ತಡಹಾಳ, ಕೊಂಗವಾಡ ಹಾಗೂ ನರಗುಂದ-ತಡಹಾಳ ಹಂದಿಗನಹಳ್ಳ ಸೇತುವೆ ಕೊಚ್ಚಿಹೋಗಿದ್ದರಿಂದ ಸಂಪರ್ಕವೇ ಕಡಿತಗೊಂಡಿದೆ. ನಾಗನೂರದಿಂದ ದಾಟನಾಳ ಮುಖ್ಯರಸ್ತೆ ಟ್ರಾಕ್ಟರ್ ಸಹಿತ ಸಂಚರಿಸಲು ಸಾಧ್ಯವಿಲ್ಲದ ಪರಸ್ಥಿತಿಯಾಗಿದೆ.
ರೈತರಿಗೆ ಬೆಳೆಹಾನಿ, ಮನೆ ಬಿದ್ದವರಿಗೆ ಮನೆ ಕಟ್ಟಿಕೊಳ್ಳಲು ಅನುದಾನ ಹಾಗೂ ಬೆಳೆವಿಮೆ ತುಂಬಿದ ರೈತರಿಗೆ ಪರಿಹಾರ ತಕ್ಷಣ ನೀಡಬೇಕೆಂದು ಒತ್ತಾಯಿಸಿದರು. ಕಲ್ಲಪ್ಪ ಹುಬ್ಬಳ್ಳಿ, ನಿಜಗುಣಿ ಗಾಡದ, ಮುತ್ತಯ್ಯ ಹಿರೇಮಠ, ಮಂಜು ಕೊಣ್ಣೂರ, ಭಾಷುಸಾಬ ದಿವಾನಸಾಬನವರ, ನಿಂಗಪ್ಪ ಮರಿನಾಯ್ಕರ, ಮಲ್ಲಣ್ಣ ಕಿರೇಸೂರ, ದಾವಲ ಮೊರಬದ, ಬಸವರಡ್ಡಿ ರೋಗಿ, ಎನ್.ವಿ. ಕಿರೇಸೂರ, ಮಲ್ಲನಗೌಡ ಚನ್ನವೀರಗೌಡ, ಎಸ್.ಎಸ್. ಕುಂಬಾರ, ಹನಮಂತಪ್ಪ ಆನಂದಿ, ಶಿವಾನಂದ ಚಿಕ್ಕನರಗುಂದ, ಶಂಭು ಹಡಪದ, ರಾಜು ದೊಡಮನಿ, ಸತೀಶ ಮಮಟಗೇರಿ, ಜೇಕರಡ್ಡಿ ಕರಮಳ್ಳಿ, ಬಸಪ್ಪ ಜಲಾದಿ, ಭೀಮನಗೌಡ ರಾಟಿ ಇನ್ನಿತರರಿದ್ದರು.