ಮೈಸೂರು: ನಿರ್ಗತಿಕ ಕುಟುಂಬಗಳಿಗೆ ಮನೆ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ರಾಜ್ಯ ಸರ್ಕಾರ ಬಡವರಿಗೆ ನಿವೇಶನ, ವಾಸಿಸಲು ಮನೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ ತೋರುತ್ತಿದೆ. ರಾಜಕಾರಣಿಗಳು, ಅಧಿಕಾರಿಗಳ ನಿರಾಸಕ್ತಿಯಿಂದ ಬಡವರಿಗೆ ಸರ್ಕಾರದಿಂದ ನೀಡಬೇಕಾದ ಮೂಲಸೌಲಭ್ಯಗಳನ್ನು ನೀಡದೆ, ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ಬಡವರನ್ನು ಕಡೆಗಣಿಸುತ್ತಿದ್ದಾರೆ.
ಅದರಂತೆ ಜಿಲ್ಲೆಯ ಹುಣಸೂರು ತಾಲೂಕಿನ ಗೋವಿಂದನಹಳ್ಳಿಯ ಅಂಬೇಡ್ಕರ್ ನಗರ, ಅರಸುಕಲ್ಲಹಳ್ಳಿಯ ಮಂಗಳೂರು ಮಾಳ, ಬನ್ನಿಕುಪ್ಪೆಯ ಮಾದಳ್ಳಿ ಮಠ, ಬಿಳಿಗೆರೆ, ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಮತ್ತು ಸಾಲಿಗ್ರಾಮ, ಕಳಲೆ, ಇಲವಾಲ ಮತ್ತು ಎಚ್.ಡಿ ಕೋಟೆ ತಾಲೂಕಿನ ದಲಿತರು ಮೂಲ ಸೌಕರ್ಯಗಳಿಲ್ಲದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಈ ನಿರ್ಗತಿಕ ಕುಟುಂಬಗಳಿಗೆ ಮನೆ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಪರಿಹಾರ ಕೊಡಿ: ಅಲ್ಲದೇ, ಚಾಮುಂಡಿಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬಲವಂತವಾಗಿ ಪೌರಕಾರ್ಮಿಕ ಗಣೇಶ್ ಎಂಬುವರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಅಧ್ಯಕ್ಷೆ ಗೀತಾ ಮತ್ತು ಪಿಡಿಒ ಆನಂದ್ ಮೇಲೆ ದೂರು ದಾಖಲಿಸಬೇಕು. ಪೌರಕಾರ್ಮಿಕ ಗಣೇಶ್‌ಗೆ ಸಫಾಯಿ ಕರ್ಮಚಾರಿ ಆಯೋಗದಿಂದ 1 ಲಕ್ಷ ರೂ. ಪರಿಹಾರ ನೀಡಬೇಕು.
ಜಿಲ್ಲೆಯಲ್ಲಿ ಜೀತಗಾರಿಕೆಯಿಂದ ಬಿಡುಗಡೆಗೊಂಡಿರುವ 493 ಜೀತ ವಿಮುಕ್ತರಿಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು. ನಿಂಗರಾಜ್ ಮಲ್ಲಾಡಿ, ಎಚ್.ಬಿ.ದಿವಾಕರ್, ಕಾರ್ಯ ಬಸವಣ್ಣ, ಪುಟ್ಟಲಕ್ಷ್ಮಮ್ಮ, ಕೆ.ನಂಜಪ್ಪ ಬಸವನಗುಡಿ, ಮೋಹನ್‌ಕುಮಾರ್ ಇತರರು ಪಾಲ್ಗೊಂಡಿದ್ದರು.