ಹುಮನಾಬಾದ: ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ತಾರತಮ್ಯ ಧೋರಣೆ ಬದೊಗೊತ್ತಿ, ಅನುದಾನ ರಹಿತ
ಶಾಲೆಗಳ ಮಕ್ಕಳಿಗೂ ಸರ್ಕಾರ ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ತಾಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ತಾಲೂಕು ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಒತ್ತಾಯಿಸಿದರು.
ಚಿಟಗುಪ್ಪ ಪಟ್ಟಣದಲ್ಲಿ ಗುರುವಾರ ನಡೆದ ಒಕ್ಕೂಟದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಂತೆ ಅತ್ಯಲ್ಪ ಶುಲ್ಕದಲ್ಲೇ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಸರ್ಕಾರ ಈ ಸಂಸ್ಥೆಗಳ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ವೀರೇಶಕುಮಾರ ಎನ್.ಮಠಪತಿ ಮಾತನಾಡಿ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶ್ರಮ ಸರ್ಕಾರದ ಗಮನಕ್ಕೆ ಬರುತ್ತಿಲ್ಲವೋ, ಬಂದರೂ ನೆರವು ನೀಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲವೋ ತಿಳಿಯುತ್ತಿಲ್ಲ. ಇಂಥ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗೆ ಕನಿಷ್ಟ ರೂ.5ಸಾವಿರ ಗೌರವಧನ ಬಿಡುಗಡೆ ಮಾಡಬೇಕು.
ಇದೆಲ್ಲದರ ಜೊತೆಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮೊದಲಾದ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಡಿ ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಸವರಾಜ ಡಂಬಳ್, ಎಂ.ಡಿ. ಮಾಜೀದ್‌ಖಾನ್, ಸೈಯದ್ ನೂರುಲ್ಲಾ ಇಸ್ಮಾಯಿಲ್, ಕುತುºದ್ದಿನ್ ಇದ್ದರು. ಸುರೇಶ ಚೌದ್ರಿ ಸ್ವಾಗತಿಸಿದರು. ಚಂದ್ರಶೇಖರ ದಾನಪ್ಪ ನಿರೂಪಿಸಿದರು.