ಬಳ್ಳಾರಿ: ಶಾಲಾ-ಕಾಲೇಜು ದಾಖಲಾತಿ ವೇಳೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಪ್ರವರ್ಗ-1 ವ್ಯಾಪ್ತಿಯಲ್ಲಿ ಬರುವ ಜಾತಿಗಳ ವಿದ್ಯಾರ್ಥಿಗಳಿಗೆ ನೀಡಬೇಕು. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿ ಸಮುದಾಯವನ್ನು ರಾಜಕೀಯವಾಗಿ ಮುನ್ನೆಲೆಗೆ ತರಬೇಕು ಎಂದು ರಾಜ್ಯ ಪ್ರವರ್ಗ 1ರ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ್ಪ, ಗಂಗಾಮತಸ್ಥ ಸಂಘದ ರಾಜ್ಯಾಧ್ಯಕ್ಷ ಮೌಲಾಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 90 ಕ್ಷೇತ್ರಗಳಲ್ಲಿ ಮತ್ತು 6 ಲೋಕಸಭೆ ಕ್ಷೇತ್ರಗಳಲ್ಲಿ ಪ್ರವರ್ಗ -1 ಜಾತಿಗಳ ಮತದಾರರೇ ನಿರ್ಣಾಯಕರಾಗಿದ್ದಾರೆ. ಈ ಜಾತಿಗಳ ಜನರು ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಒಗ್ಗೂಡಿ ಸಂಘಟಿತರಾದಲ್ಲಿ ಸುಮಾರು 32 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಮತದಾರರಾಗಲಿದ್ದು, ಚುನಾವಣೆಯಲ್ಲಿ ಸ್ಪ ರ್ಧಿಸಿ ಸ್ವಂತ ಬಲದಿಂದ ಗೆಲ್ಲುವ ಸಾಧ್ಯತೆಯಿದೆ. ಹಾಗಾಗಿ ಈ ಜಾತಿಗಳಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯವಾಗಿ ಮುನ್ನೆಲೆಗೆ ಬರಲು ಅವಕಾಶ ಕಲ್ಪಿಸಬೇಕು ಎಂದವರು ಕೋರಿದರು.
ಶಿಕ್ಷಣದಲ್ಲಿ ಎಸ್ಸಿ, ಎಸ್ಟಿ ಜಾತಿಗಳಿಗೆ ಸಿಗುವ ಸೌಲಭ್ಯವನ್ನು ಪ್ರವರ್ಗ-1 ಜಾತಿಗಳ ವಿದ್ಯಾರ್ಥಿಗಳಿಗೂ ಕಲ್ಪಿಸಬೇಕು. ಯಾವುದೇ ಆದಾಯದ ಮಿತಿ ವಿಧಿಸಬಾರದು. ರಾಜ್ಯದ ಎಲ್ಲ ವಿವಿಗಳಲ್ಲಿ ಪ್ರವರ್ಗ-1 ಜಾತಿಗಳ ಕೋಶವನ್ನು ಮರು ಸ್ಥಾಪಿಸಿ ವಿದ್ಯಾರ್ಥಿ ನಿಲಯವನ್ನು ಪುನಾರಂಭಿಸಬೇಕು. ಅವುಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತ್ಯೇಕ ಮೀಸಲಾತಿ ಸೌಲಭ್ಯ ನೀಡಬೇಕು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 1 ಕೋಟಿಗೂ ಹೆಚ್ಚಿರುವ 95 ಜಾತಿಗಳು ಮತ್ತು 376 ಉಪಜಾತಿಗಳಿರುವ ಪ್ರವರ್ಗ 1ರ ಜನರಿಗೆ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೇ. 4ರಷ್ಟು ಮಾತ್ರ ಮೀಸಲಾತಿ ದೊರೆಯುತ್ತಿದ್ದು, ಶೇ. 8ಕ್ಕೆ ಹೆಚ್ಚಿಸಬೇಕು. ಬಿಜೆಪಿ ಸರ್ಕಾರದಲ್ಲಿ ಪ್ರವರ್ಗ-1ರ ಜಾತಿಗಳ ಇಬ್ಬರು ಶಾಸಕರಿದ್ದು, ಅವರಿಗೆ ಸಚಿವ ಸಂಪುಟದ ವಿಸ್ತರಣೆಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಪ್ರವರ್ಗ-1ರ ಅಭಿವೃದ್ಧಿ ನಿಗಮಗಳಿಗೆ ಪ್ರತ್ಯೇಕವಾಗಿ ತಲಾ 100 ಕೋಟಿ ರೂ. ಅನುದಾನ ಮತ್ತು ಅಲೆಮಾರಿ, ಅಲೆ ಅಲೆಮಾರಿ ನಿಗಮಕ್ಕೆ 300 ಕೋಟಿ ರೂ. ಅನುದಾನ ನೀಡಬೇಕು ಸೇರಿದಂತೆ ಇನ್ನಿತರೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಿಮ್ಮಪ್ಪ ಯಾದವ್, ಚಿದಾನಂದಪ್ಪ, ಧನರಾಜ್, ಸಂಘಟನಾ ಕಾರ್ಯದರ್ಶಿ ಸೂರ್ಯ ಪ್ರಕಾಶ್ ಕೋಲಿ ಇತರರಿದ್ದರು.