ಗದಗ: ವಾಣಿಜ್ಯ ಬ್ಯಾಂಕ್‌ಗಳ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್‌ಗಳ ನೌಕಕರಿಗೆ ನೀಡಬೇಕೆಂದು ಒತ್ತಾಯಿಸಿ ಕಳೆದ 15 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟದ ಫಲವಾಗಿ ನಿವೃತ್ತಿ ವೇತನ ಜಾರಿಗೊಂಡಿದೆ. ಇದು ಬ್ಯಾಂಕ್ ನೌಕರರ ಹೋರಾಟಕ್ಕೆ ಸಂದ ಜಯ ಎಂದು ಎನ್‌ಎಫ್‌ಆರ್‌ಆರ್‌ಬಿಇ ಅಧ್ಯಕ್ಷ ಎಚ್. ನಾಗಭೂಷಣ ರಾವ್ ಹೇಳಿದರು.
ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕಕರ ಹಾಗೂ ಅಧಿಕಾರಿಗಳ ಸಂಘದಿಂದ ನಗರದಲ್ಲಿ ಗುರುವಾರ ನಡೆದ ‘ಪೆನ್ಶನ್ ವಿಜಯೋತ್ಸವ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತಿ ವೇತನಕ್ಕಾಗಿ ಕಳೆದ ಒಂದೂವರೆ ದಶಕದಿಂದ ಸಾರ್ವಜನಿಕ ಹಾಗೂ ಕಾನೂನು ಹೋರಾಟದ ಫಲವಾಗಿ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ತಿಳಿಸಿದರು.
ಗ್ರಾಮೀಣ ಬ್ಯಾಂಕ್ ನೌಕರರ ಇತರೆ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಬಲಪಡಿಸಬೇಕು. ಬ್ಯಾಂಕಿಂಗ್ ವಲಯವನ್ನು ಉಳಿಸುವುದರೊಂದಿಗೆ ವೈಯಕ್ತಿಕ ಜೀವನಕ್ಕೆ ಅಗತ್ಯವಿರುವ ಬೇಡಿಕೆಗಳಿಗೆ ಹೋರಾಡಬೇಕು ಎಂದರು. ಎಕೆಜಿಬಿಇಎಫ್ ಪ್ರಧಾನ ಕಾರ್ಯದರ್ಶಿ ವಿ.ಕೆ.ಬನ್ನಿಗೋಳ ಮಾತನಾಡಿ, ಸಂಘವು ಉದ್ಯೋಗಿಗಳ ಪರವಾಗಿ ಕೆಲಸ ಮಾಡುತ್ತಿದೆ. ಸರಕಾರದ ಉದ್ಯೋಗಿಗಳ ವಿರುದ್ಧದ ಧೋರಣೆಗಳನ್ನು ನೇರವಾಗಿ ಖಂಡಿಸುತ್ತಿದೆ. ಯುವ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಂಘಟನೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಎಸ್.ಎನ್. ಸವದತ್ತಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಎಂ. ವೈದ್ಯ, ಗಣಪತಿ ಹೆಗಡೆ, ಎಲ್. ಎಸ್. ಲೋಕರೆ, ಆರ್.ಡಿ. ಸೂಗೂರ, ಎಚ್.ಎ. ಪಾಟೀಲ, ಸಂತೋಷ ವಡೆಯರ, ರಾಜು ಭಜಂತ್ರಿ, ವಿಶ್ವನಾಥ ರೆಡ್ಡಿ, ಎಸ್.ಜಿ. ಹೊಂಬಳ, ಸಿದ್ರಾಮಯ್ಯ ಹಿರೇಮಠ ಉಪಸ್ಥಿತರಿದ್ದರು. ಸಮಾರಂಭ ಆರಂಭಕ್ಕೂ ಮುನ್ನ ಲಿಂ.ಜ.ತೋಂಟದ ಸಿದ್ಧಲಿಂಗ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಟಿ.ಆರ್. ಹಟ್ಟಿ ಸ್ವಾಗತಿಸಿದರು. ಪ್ರವೀಣ ಅಣ್ಣಿಗೇರಿ ನಿರೂಪಿಸಿದರು. ವಿ.ಎಸ್.ನರೇಗಲ್ ವಂದಿಸಿದರು.