ಕೊಪ್ಪಳ: ಎಲ್ಲಾ ಇಲಾಖೆ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಕಾರ್ಮಿಕ ಕಾಯ್ದೆ ಅನ್ವಯ ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳನ್ನು ಒದಗಿಸಬೇಕೆಂದು ಎಡಿಸಿ ಎಂ.ಪಿ. ಮಾರುತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ನಡೆದ ಹೊರಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ವೇತನ ಹಾಗೂ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಒದಗಿಸುವ ಕುರಿತು ಚರ್ಚಿಸಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ 1970 ಮತ್ತು ಕರ್ನಾಟಕ ನಿಯಮಗಳು 1971ರಂತೆ ಎಲ್ಲ ಗುತ್ತಿಗೆದಾರರು ಸೌಲಭ್ಯ ನೀಡಬೇಕು. ಇಲಾಖೆ ಮುಖ್ಯಸ್ಥರು ಗುತ್ತಿಗೆದಾರರು ನೀಡುವ ವೇತನದ ಕುರಿತು, ಇತರೆ ಸೌಲಭ್ಯ ಒದಗಿಸಿದ ಕುರಿತು ಸಂಪೂರ್ಣ ಮಾಹಿತಿ ಪಡೆದು ನ್ಯೂನ್ಯತೆಗಳು ಕಂಡುಬಂದರೆ ಸೂಕ್ತ ಸೂಚನೆ ನೀಡಿ ಹೊರಗುತ್ತಿಗೆ ಸಿಬ್ಬಂದಿಗೆ ಸರಿಯಾಗಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವಂತೆ ನೋಡಿಕೊಳ್ಳಬೇಕು ಎಂದರು.
ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಮಾತನಾಡಿ, ಪ್ರತಿಯೊಂದು ಸಂಸ್ಥೆಯು 20ಕ್ಕಿಂತ ಹೆಚ್ಚು ಕಾರ್ಮಿಕರನ್ನು, ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡರೆ ಅಂತಹ ಸಂಸ್ಥೆಗಳನ್ನು ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ದತಿ) ಕಾಯ್ದೆ 1970ರಡಿ ಮೂಲ ಮಾಲೀಕರು ನೋಂದಣಿ ಹಾಗೂ ಗುತ್ತಿಗೆದಾರರು ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಮೂಲ ಮಾಲೀಕರು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ನೋಂದಣಿ, ತಿದ್ದುಪಡಿ ಮಾಡಿಸಿಕೊಳ್ಳಬೇಕು. ಆಯ್ಕೆಯಾದ ಗುತ್ತಿಗೆದಾರರು ಕಡ್ಡಾಯವಾಗಿ ಕಾರ್ಯವ್ಯಾಪ್ತಿಯ ಸಹಾಯಕ ಕಾರ್ಮಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಅವರಲ್ಲಿ ಪರವಾನಗಿ ಪಡೆದುಕೊಳ್ಳಲು ಸೂಚಿಸಿ ಪರವಾನಗಿ ಪ್ರತಿ ಪಡೆದುಕೊಳ್ಳಬೇಕು. ತಪ್ಪಿದರೆ ಇದು ಮೂಲ ಮಾಲೀಕರು, ಗುತ್ತಿಗೆದಾರರ ವಿರುದ್ಧ ಕಾಯ್ದೆಯ ಅನುಸಾರ ಕೇಸ್ ದಾಖಲಿಸಲು ಅವಕಾಶವಿದೆ ಎಂದರು.
ಎಲ್ಲ ಮೂಲ ಮಾಲೀಕರು, ಗುತ್ತಿಗೆದಾರರು ರಾಜ್ಯ ಸರಕಾರ ನೀಡಿರುವ ಅಧಿಸೂಚನೆಯ ಅನುಸೂಚಿತ ಉದ್ದಿಮೆಗೆ ಸಂಬಂಧಿಸಿದಂತೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನದ ಅಧಿಸೂಚನೆಗಳಂತೆ ಕನಿಷ್ಟ ವೇತನದ ದರಗಳಲ್ಲಿ ವೇತನ ಪಾವತಿಸಬೇಕು. ಮೂಲ ಮಾಲೀಕರು ತಮ್ಮ ಕಾರ್ಮಿಕರಿಗೆ, ನೌಕರರಿಗೆ ಗುತ್ತಿಗೆದಾರರು ಪಾವತಿಸಿರುವ ವೇತನ ಕನಿಷ್ಟ ವೇತನದ ದರಕ್ಕಿಂತ ಕಡಿಮೆ ಇಲ್ಲದಂತೆ ಪಾವತಿಸಿರುತ್ತಾರೆಯೇ ಎಂದು ದಾಖಲೆಗಳ ಮೂಲಕ ಖಚಿತ ಪಡಿಸಿಕೊಳ್ಳಬೇಕು.
ಅಂತಹ ದಾಖಲೆ ಇಟ್ಟುಕೊಳ್ಳಬೇಕು. ಪ್ರತಿ ವರ್ಷ ಏಪ್ರಿಲ್‌ನಿಂದ ಸರಕಾರ ಹೆಚ್ಚುವರಿ ಮಾಡುವ ತುಟ್ಟಿ ಭತ್ಯೆಯನ್ನು ಅದೇ ಮಾಹೆಯಿಂದ ಅನ್ವಯವಾಗುವಂತೆ ಪಾವತಿಸಬೇಕು. ತಪ್ಪಿದರೆ ಇದು ವ್ಯತ್ಯಾಸದ ಮೊತ್ತಕ್ಕೆ ಕ್ಲೈಮ್ ಅರ್ಜಿಯನ್ನು ದಾಖಲಿಸಲು ಅವಕಾಶ ಮಾಡಿಕೊಡುತ್ತದೆ ಎಂದರು.
ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸದಸ್ಯ ಪಂಪಾಪತಿ ರಾಟೆ ಮಾತನಾಡಿ, ಗುತ್ತಿಗೆ ಕಾರ್ಮಿಕರ ಮೂಲ ಮಾಲೀಕರು ಕಾರ್ಮಿಕರ ವೇತನವನ್ನು ಬಿಲ್ ಮೂಲಕ ಜಮೆಗೊಳಿಸಿದರೂ ಗುತ್ತಿಗೆದಾರರು ಕಾರ್ಮಿಕರ ಖಾತೆಗಳಿಗೆ ಜಮೆ ಮಾಡದೇ ಇರುವುದನ್ನು ಮೂಲ ಮಾಲೀಕರಾದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ| ಅವಿನಾಶ್ ನಾಯಕ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ತಳವಾರ್, ಗೋಪಾಲ್ ಧೂಪದ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗುತ್ತಿಗೆದಾರರು ಉಪಸ್ಥಿತರಿದ್ದರು.
ವೇತನವನ್ನು ಪ್ರತಿ ತಿಂಗಳು 7ನೇ ತಾರೀಖೀನೊಳಗೆ ಗುತ್ತಿಗೆ ಕಾರ್ಮಿಕರ, ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಬೇಕು. ಅವರವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆಯೇ ಎಂದು ಖಚಿತ ಪಡಿಸಿ, ದಾಖಲೆ ನಿರ್ವಹಿಸಬೇಕು. ಕ್ಯಾಂಟೀನ್, ರೆಸ್ಟ್‌ರೂಮ್, ಕುಡಿಯುವ ನೀರು, ಪ್ರಥಮ ವೈದ್ಯಕೀಯ ಚಿಕಿತ್ಸೆ, ಶೌಚಾಲಯ ಕಾರ್ಮಿಕರಿಗೆ ಗುತ್ತಿಗೆದಾರರು ಒದಗಿಸಬೇಕು. ಮೂಲ ಮಾಲೀಕರು ಮತ್ತು ಗುತ್ತಿಗೆದಾರರು ಕಾಯ್ದೆಯಡಿ ಅಗತ್ಯ ರಿಜಿಸ್ಟರ್ ಮತ್ತು ದಾಖಲೆಗಳನ್ನು ನಿರ್ವಹಿಸಬೇಕು. ಕಾಲಕಾಲಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಗುತ್ತಿಗೆದಾರರು ವರದಿಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಬೇಕು.