Advertisement

ಎಪಿಎಂಸಿ-ರೈತ ಭವನಕ್ಕೆ ಸೌಕರ್ಯ ಕಲ್ಪಿಸಿ

06:43 PM Sep 25, 2020 | Suhan S |

ಯಾದಗಿರಿ: ಬಸವೇಶ್ವರ ಗಂಜ್‌ ಆವರಣದಲ್ಲಿ ಮತ್ತು ರೈತ ಭವನದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಎರಡು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ತಮ್ಮ ಕಚೇರಿ ಎದುರು ಹೋರಾಟ ಮಾಡಲಾಗುವುದು ಎಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.

Advertisement

ರೈತ ಸಂಘದ ಕಾರ್ಯಕರ್ತರು ಎಪಿಎಂಸಿಗೆ ಆಗಮಿಸಿ ಮನವಿ ಸಲ್ಲಿಸಿದ ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ರಾಜುಗೌಡ ಚಾಮನಳ್ಳಿ, ಯಾದಗಿರಿ ನಗರದಲ್ಲಿರುವ ಬಸವೇಶ್ವರ ಗಂಜ್‌, (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಆವರಣದಲ್ಲಿ ಮತ್ತು ರೈತ ಭವನದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ನಮ್ಮ ಸಂಘಟನೆಯ ನಿಯೋಗ ಎಪಿಎಂಸಿಗೆ ಭೇಟಿ ನೀಡಿದಾಗ ಕಂಡುಬಂದಿದೆ. ರೈತ ಭವನದಲ್ಲಿ ಧೂಳು ತುಂಬಿದ್ದು, ಬಳಕೆಯೇ ಇಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಭವನದಲ್ಲಿ ಕುಡಿವ ನೀರಿನ ವ್ಯವಸ್ಥೆಯೂ ಇಲ್ಲ. ಫ್ಯಾನ್‌ಗಳಿಗೆ ರೆಕ್ಕೆಯೇ ಇಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳ ಗೂಡಾಗಿರುವ ರೈತ ಭವನಕ್ಕೆ ತಕ್ಷಣ ಕಾಯಕಲ್ಪ ನಿಡಬೇಕು. ಮತ್ತು ಭವನವನ್ನು ರೈತರ ಉಪಯೋಗಿಯಾಗಿಸಬೇಕು ಎಂದು ಆಗ್ರಹಿಸಿದರು.

ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ದನದ ಸಂತೆ ವಾರಕ್ಕೊಮ್ಮೆ ನಡೆಯುತ್ತಿದ್ದು ಇಲ್ಲಿಯೂ ಸಹ ಯಾವುದೇ ಮೂಲ ಸೌಕರ್ಯಗಳು ಇಲ್ಲ. ತಕ್ಷಣವೇ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ರೈತರು ಮಾರುಕಟ್ಟೆಗೆ ತಂದಬೆಳೆಯನ್ನು ಸಮಿತಿಗೆ ಸಲ್ಲಿಸಲು ಎಪಿಎಂಸಿಯಿಂದ ನೀಡುವ ಟೆಂಡರ್‌ ಫಾರಂಗಳನ್ನು ಸರಿಯಾದ ಸಮಯಕ್ಕೆ ನೀಡಬೇಕು. ಶೀಘ್ರ ಸಮಸ್ಯೆ ಇತ್ಯರ್ಥವಾಗದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಎಪಿಎಂಸಿ ಕಾರ್ಯದರ್ಶಿ ಸುಮಂಗಲಾ, ಅಧ್ಯಕ್ಷ ಬಸಲಿಂಗಪ್ಪ ನಾಯಕ ಮನವಿ ಸ್ವೀಕರಿಸಿ, 15 ದಿನಗಳಲ್ಲಿಯೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ರೈತ ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next