Advertisement

ಫ‌ಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸಿ

09:27 PM Aug 07, 2019 | Lakshmi GovindaRaj |

ಕೊಳ್ಳೇಗಾಲ: ತಾಲೂಕು ಪಂಚಾಯಿತಿ ವತಿಯಿಂದ ಪ.ಜಾತಿ, ಪರಿಶಿಷ್ಟ ವರ್ಗದ ಫ‌ಲಾನುಭವಿಗಳನ್ನು ಸಾಲ ಸೌಲಭ್ಯಕ್ಕಾಗಿ ಆಯ್ಕೆ ಮಾಡಿದವರಿಗೆ ಬ್ಯಾಂಕ್‌ಗಳಲ್ಲಿ ಸಾಲ ದೊರೆಯದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಖುದ್ದು ನಿಂತು ಫ‌ಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ತಾಪಂ ಅಧ್ಯಕ್ಷ ರಾಜೇಂದ್ರ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗೊಂಚಲು ಗ್ರಾಮ ಯೋಜನೆಯಡಿಯಲ್ಲಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಿದ ವೇಳೆ ಫ‌ಲಾನುಭವಿಗಳಿಗೆ ಆಯ್ಕೆಯಾದ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುತ್ತಿಲ್ಲವೆಂದು ದೂರುಗಳು ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಫ‌ಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ದೊರಕಿಸಿಕೊಟ್ಟಾಗ ಸರ್ಕಾರದ ಯೋಜನೆಗಳು ಫ‌ಲಪ್ರದವಾಗಲಿದೆ ಎಂದರು.

ಫ‌ಲಾನುಭವಿಗಳಿಗೆ ಸಾಲ ತಲುಪಲಿ: ಗೊಂಚಲು ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆಯಾದ ಫ‌ಲಾನುಭವಿಗಳ ಸಾಲ ಬ್ಯಾಂಕ್‌ಗಳಲ್ಲಿ ಬಾಕಿ ಇರುವುದರಿಂದ ಬ್ಯಾಂಕ್‌ ಅಧಿಕಾರಿಗಳು ಸಾಲ ಸೌಲಭ್ಯ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದು, ಹಳೆಯ ಸಾಲ ಬಾಕಿ ಇಲ್ಲದಂತಹ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಕಳುಹಿಸಿಕೊಡುವ ಮೂಲಕ ಸಾಲ ಸೌಲಭ್ಯಗಳು ಫ‌ಲಾನುಭವಿಗಳಿಗೆ ಧಕ್ಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾಮಗಾರಿಗಳು ವಿಳಂಬ: ತಾಲೂಕು ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕ್ರಿಯಾಯೋಜನೆ ಅನುಷ್ಠಾನ ತಡವಾಗಿರುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿದೆ ಎಂದು ಸದಸ್ಯರು ದೂರಿದ್ದು, ಈ ಹಿಂದೆ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಅನುದಾನವನ್ನು ಲಾಕ್‌ ಮಾಡಲಾಗಿತ್ತು. ಚುನಾವಣೆಯ ಬಳಿಕ ಮಾರ್ಚ್‌ ತಿಂಗಳು ಬಂದ ಕಾರಣ ಕಾಮಗಾರಿಗಳು ವಿಳಂಬವಾಗಿದೆ ಎಂದು ಹೇಳಿದರು.

ಅನುದಾನ ಸಮಾನವಾಗಿ ಹಂಚಿ: ಜಿಪಂ ವತಿಯಿಂದ ತಾಲೂಕು ಪಂಚಾಯಿತಿ ಅಭಿವೃದ್ಧಿಗೆ ಬಂದಿರುವ ಅನುದಾನವನ್ನು ಎಲ್ಲಾ ತಾಪಂ ಸದಸ್ಯರ ಕ್ಷೇತ್ರಗಳಿಗೆ ಸಮಾನ ವಾಗಿ ಹಂಚಬೇಕೆಂದು ಸದಸ್ಯರು ಮನವಿ ಮಾಡಿದ್ದು, ಯಾವ ಸದಸ್ಯರನ್ನು ಕಡೆಗಣಿಸದೆ ಪಕ್ಷಾತೀತವಾಗಿ ಅನುದಾನವನ್ನು ಹಂಚಿಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅಭಿವೃದ್ಧಿ ಕೆಲಸಗಳು ಕುಂಠಿತ: ವಿವಿಧ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂದು ಸದಸ್ಯರು ಒತ್ತಾ ಯಿಸಿದ್ದು, ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಳಿದಿರುವ ಕಾಮಗಾರಿಗಳನ್ನು ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರಕ್ಕೆ ಅನುದಾನ: ಸರ್ಕಾರದಿಂದ ವಿವಿಧ ಯೋಜನೆಗಳ ನಿರ್ಮಾಣಕ್ಕಾಗಿ ಜಿಪಂ ಇಲಾಖೆಗೆ ಸಾಕಷ್ಟು ಅನುದಾನ ನೀಡಲಾಗಿದೆ. ಜಿಪಂನ ಎಂಜಿನಿಯರ್‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೋದಂಡರಾಮಯ್ಯ ಅವರ ನಿರ್ಲಕ್ಷ್ಯದಿಂದ ಬಂದಿದ್ದ ಹಣ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಇದರಿಂದ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷರಿಗೆ ಒತ್ತಾಯ: ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೋದಂಡರಾಮಯ್ಯ ಅವರು ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಮತ್ತು ಚುನಾಯಿತ ಪ್ರತಿನಿಧಿಗಳಿಗೂ ಸಿಗುವುದಿಲ್ಲ. ಕಚೇರಿಯ ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಮನೆಯನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಮತ್ತು ಸರ್ಕಾರದಿಂದ ಬಂದಿರುವ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ಕೆಲವು ಕಾಮಗಾರಿಗಳು ಮಾತ್ರ ಆಗಿದ್ದು, ಅನುಮಾನಕ್ಕೆ ಆಸ್ಪದವಿದ್ದು, ಕೂಡಲೇ ತಾಪಂ ಸದಸ್ಯರ ತಂಡವೊಂದನ್ನು ರಚಿಸಿ ಪರಿಶೀಲನೆ ನಡೆಸಬೇಕು ಎಂದು ತಾಪಂ ಸದಸ್ಯ ಜಾವೀದ್‌ ಅಹಮ್ಮದ್‌ ಅಧ್ಯಕ್ಷರಲ್ಲಿ ಒತ್ತಾಯಿಸಿದರು.

ಅಧ್ಯಕ್ಷರಿಗೆ ತರಾಟೆ: ತಾಪಂ ಸದಸ್ಯರಿಗೆ ಯಾವುದೇ ತರಹದ ಮಾಹಿತಿಗಳು ಅಧಿಕಾರಿಗಳಿಂದ ಬರುತ್ತಿಲ್ಲ. ಸರ್ಕಾರ ವಿವಿಧ ಯೋಜನೆಯಡಿಯಲ್ಲಿ ಫ‌ಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಮಂಜೂರು ಮಾಡಿದ್ದರೂ ಸಹ ಸದಸ್ಯರಿಗೆ ಮಾಹಿತಿ ಕೊಡುತ್ತಿಲ್ಲ. ಆರೋಗ್ಯ ಉಪ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆಗಳು ದೊರೆಯುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಕೈ ಸದಸ್ಯರು ಸೇರಿದಂತೆ ಬಿಜೆಪಿ ಸದಸ್ಯರು ವಾಕ್ಸಮರ ಮಾಡುತ್ತಿದ್ದಂತೆ ಕೈ ಪಕ್ಷದ ಅಧ್ಯಕ್ಷ ರಾಜೇಂದ್ರ ತರಾಟೆಗೆ ಒಳಗಾದ ಹಿನ್ನೆಲೆಯಲ್ಲಿ ಸ್ವಲ್ಪ ಹೊತ್ತು ಸಭೆಯಲ್ಲಿ ಗೊಂದಲ ಉಂಟಾಯಿತು.

ಶ್ರದ್ಧಾಂಜಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಪಂ ಉಪಾಧ್ಯಕ್ಷೆ ಲತಾ, ಇಒ ಚಂದ್ರು, ಸ್ಥಾಯಿ ಸಮಿತಿ ಅಧ್ಯಕ್ಷೆ ಅರುಣ್‌ಕುಮಾರ್‌ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next