ಹೊಸದಿಲ್ಲಿ : ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಖರೀದಿ ವ್ಯವಹಾರದಲ್ಲಿ ಮಧ್ಯವರ್ತಿಯಾಗಿದ್ದು ಯುಎಇ ಯಿಂದ ಭಾರತಕ್ಕೆ ಗಡೀಪಾರುಗೊಂಡಿರುವ ಕ್ರಿಶ್ಚಿಯನ್ ಮೈಕಲ್ ಅವರಿಗೆ ಕಾನ್ಸುಲರ್ ಸಂಪರ್ಕ ಸೌಕರ್ಯ ಕಲ್ಪಿಸುವಂತೆ ಬ್ರಿಟಿಷ್ ಹೈಕಮಿಷನ್ ಕೋರಿದೆ.
ಬ್ರಿಟಿಷ್ ಪ್ರಜೆಯಾಗಿರುವ ಮೈಕಲ್ ಅವರನ್ನು ನಿನ್ನೆ ಬುಧವಾರ ನ್ಯಾಯಾಲಯ ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಯುಎಇ ಯಿಂದ ಭಾರತಕ್ಕೆ ಗಡೀಪಾರುಗೊಂಡಿರುವ ಮೈಕಲ್ ಅವರು ಇಲ್ಲೀಗ 3,600 ಕೋಟಿ ರೂ.ಗಳ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ.
ಮೈಕಲ್ ಅವರ ಸ್ಥಿತಿಗತಿಯ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಭಾರತೀಯ ಅಧಿಕಾರಿಗಳನ್ನು ಬ್ರಿಟಿಷ್ ಹೈಕಮಿಶನ್ ಕೋರಿರುವುದಾಗಿ ವಕ್ತಾರ ತಿಳಿಸಿದ್ದಾರೆ.
ಮೈಕಲ್‌ಗೆ ಕಾನ್ಸುಲರ್ ಸಂಪರ್ಕ ಸೌಕರ್ಯ ಒದಗಿಸುವಂತೆ ನಾವು ಕೋರಿದ್ದೇವೆ ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.