Advertisement

ಜನರಿಗೆ ಉತ್ತಮ ಸೌಲಭ್ಯ ಕಲ್ಪಿಸಿ

01:02 PM Aug 04, 2019 | Suhan S |

ನಾಯಕನಹಟ್ಟಿ: ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ ಹೇಳಿದರು.

Advertisement

ಸಮೀಪದ ಓಬಯ್ಯನಹಟ್ಟಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತಿಹಾಸ ಕಾಲದಿಂದಲೂ ಕಲ್ಯಾಣ ರಾಜ್ಯದ ಆಡಳಿತ ದೊರೆಯಬೇಕು ಎನ್ನುವುದು ಜನರ ಆಶಯವಾಗಿದೆ. ಜನರಿಗೆ ಶಿಕ್ಷಣ, ಕುಡಿಯುವ ನೀರು, ಆಶ್ರಯ ಹಾಗೂ ಉದ್ಯೋಗ ನೀಡುವುದು ಕಲ್ಯಾಣ ರಾಜ್ಯದ ಮುಖ್ಯ ಧ್ಯೇಯ. ಸರ್ಕಾರ ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಈ ಕಾರ್ಯಕ್ರಮ ಆಯೋಜಿಸಿದೆ. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳು ಹಿಂದುಳಿದಿವೆ. ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುವುದು ಇದಕ್ಕೆ ಪ್ರಮುಖ ಕಾರಣ ಎಂದರು.

ನಾನು ಚಳ್ಳಕೆರೆ ತಾಲೂಕಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಹೀಗಾಗಿ ಇಲ್ಲಿನ ಜನರ ಕಷ್ಟಗಳ ಬಗ್ಗೆ ಸ್ವಷ್ಟವಾದ ಮಾಹಿತಿ ಇದೆ. ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಜನರಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ನೀಡುವುದಕ್ಕೆ ಆದ್ಯತೆ ನೀಡಬೇಕು. ಇದೀಗ ಎಲ್ಲೆಡೆ ಬರದ ಛಾಯೆ ಆವರಿಸಿದೆ. ತಾಲೂಕಿನಲ್ಲಿ 12 ಸಾವಿರ ಕ್ವಿಂಟಲ್ ಬಿತ್ತನೆ ಶೇಂಗಾ ಮಾರಾಟವಾಗಿದೆ. ಆದರೆ ಇದನ್ನು ಬಿತ್ತನೆ ಮಾಡಲು ಅಗತ್ಯವಾದ ತೇವಾಂಶ ಭೂಮಿಯಲ್ಲಿಲ್ಲ. ಜನರು ಶೇಂಗಾ ಬದಲಾಗಿ ಪರ್ಯಾಯ ಬೆಳೆಗಳ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಸದಸ್ಯ ಓಬಣ್ಣ ಮಾತನಾಡಿ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ ವಿದ್ಯಾರ್ಥಿಗಳಿದ್ದಾರೆ. ಆದರೆ ಸುಸಜ್ಜಿತವಾದ ಕಟ್ಟಡವಿಲ್ಲ. ವಿದ್ಯಾಭ್ಯಾಸ ಮುಂದುವರಿಕೆಗೆ ಅಗತ್ಯವಾದ ಪ್ರೌಢಶಾಲೆ ಇಲ್ಲ. ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಸಆಪನೆಗೆ ಮಂಜೂರಾತಿ ನೀಡಬೇಕು. ಗ್ರಾಮದ ಪಕ್ಕದಲ್ಲಿರುವ ಬಲ್ಲನಾಯಕನಹಟ್ಟಿ ಗ್ರಾಮದಲ್ಲಿ ಅಕ್ರಮ ಮಧ್ಯದ ಹಾವಳಿ ಹೆಚ್ಚಾಗಿದೆ. ಬರಗಾಲದ ಇಂದಿನ ದಿನಗಳಲ್ಲಿ ಮದ್ಯದ ಹಾವಳಿಯಿಂದ ಜನರ ಸಾಮಾಜಿಕ ಸ್ಥಿತಿ ಹಾಳಾಗುತ್ತಿದೆ. ಇದಕ್ಕೆ ಅಬಕಾರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೃಷಿ ಇಲಾಖೆಯಿಂದ ಕಳೆದ ವರ್ಷ ವಿಮೆ ಹಣ ನೀಡಿಲ್ಲ, ಓಬಯ್ಯನಹಟ್ಟಿ-ತಿಮ್ಮಪ್ಪಯ್ಯನಹಟ್ಟಿ ನೇರ ರಸ್ತೆ ಹಾಗೂ ಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕು. ಎರಡು ಹಳ್ಳಿಗಳಿಗೆ ನಿರಂತರ ಜ್ಯೋತಿ ಸಂಪರ್ಕಯನ್ನು ಇಲ್ಲಿಯವರೆಗೂ ನೀಡಿಲ್ಲ ಸೇರಿದಂತೆ ಹಲವಾರು ಸಮಸ್ಯೆಗಳು ಜನರಿಂದ ಕೇಳಿ ಬಂದವು. ಎಲ್ಲ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

Advertisement

ತಾಪಂ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಾಣಾಧಿಕಾರಿ, ಬೆಸ್ಕಾಂ ಎಇಇ, ಪೊಲೀಸ್‌, ಅರಣ್ಯ ಇಲಾಖೆ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರುಹಾಜರಾಗಿದ್ದರು. ಜನಸ್ಪಂದನ ಸಭೆಯಲ್ಲಿ ಉಪ ತಹಶೀಲ್ದಾರ್‌ ಜಗದೀಶ್‌, ಮುಖಂಡ ಪರಮೇಶ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜಪ್ಪ, ಕೃಷಿ ಅಧಿಕಾರಿ ಸುಮಾ, ಗ್ರಾಪಂ ಅಧ್ಯಕ್ಷೆ ರತ್ಮಮ್ಮ, ತಾಪಂ ಸದಸ್ಯೆ ಮಲ್ಲಮ್ಮ, ಗ್ರಾಪಂ ಸದಸ್ಯರಾದ ಮಂಜಣ್ಣ, ಕಾಮರಾಜ್‌, ಸಣ್ಣಮಲ್ಲಯ್ಯ, ಪರಮೇಶ್‌, ಯರಬಾಲಯ್ಯ ಉಪಸ್ಥಿತರಿದ್ದರು.

ಹಾಸ್ಟೆಲ್ ಮಂಜೂರಾತಿಗೆ ಪ್ರಸ್ತಾವನೆ:

ನಾಯಕನಹಟ್ಟಿ ಪಟ್ಟಣ ಹಾಗೂ ತಳಕು ಗ್ರಾಮಕ್ಕೆ ಎಸ್ಟಿ ಹಾಸ್ಟೆಲ್ಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವುಗಳಿಗೆ ಅನುಮತಿ ದೊರೆಯುವ ಸಾಧ್ಯತೆ ಇದೆ. ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಆಧಾರ್‌ ಸಂಖ್ಯೆಗೆ ಲಿಂಕ್‌ ಮಾಡಿಸಬೇಕು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next