ಚಿತ್ರದುರ್ಗ: ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೆ ಕಡ್ಡಾಯವಾಗಿ ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ 2020-21ನೇ ಸಾಲಿನ ಅಂದಾಜು ಅಯವ್ಯಯ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಗ್ರಂಥಾಲಯ, ಓದುಗರ ಅಭಿರುಚಿಗೆ ತಕ್ಕ ಇತರೆ ಪುಸ್ತಕಗಳನ್ನು ಪ್ರತ್ಯೇಕ ನೋಂದಣಿ ಪುಸ್ತಕ ನಿರ್ವಹಣೆ ಮಾಡಬೇಕು. ಗ್ರಂಥಾಲಯಗಳಿಗೆ ಸುಣ್ಣ, ಬಣ್ಣ ಬಳಿಸಬೇಕೆಂದರು. ಮುಖ್ಯ ಗ್ರಂಥಾಲಯಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ, ಹೆಸರಾಂತ ಲೇಖಕರ ಪುಸ್ತಕಗಳನ್ನು ಗ್ರಂಥಾಲಯ ಪ್ರಾಧಿಕಾರದ ಕೋಟಾದಡಿ ಓದುಗರ ಬೇಡಿಕೆ ಅನ್ವಯ, ಅಧಿಕಾರಿಗಳ ಸಲಹೆ ಮೇರೆಗೆ ಐಎಎಸ್, ಕೆ.ಎ.ಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
2020-21ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಪ್ರಾಕಾರದಲ್ಲಿ ಒಟ್ಟು 80.80 ಲಕ್ಷ ರೂ. ಅಂದಾಜು ಆದಾಯ ಆಗುವ ನಿರೀಕ್ಷೆ ಇದ್ದು, ಇದರಲ್ಲಿ ಅಂದಾಜು 54.80 ಲಕ್ಷ ರೂ. ವ್ಯಯ ಆಗುವ ನಿರೀಕ್ಷೆ ಇದೆ. ಏಪ್ರಿಲ್ 01 ರಿಂದ ಮೇ 31 ರವರೆಗೆ ಗ್ರಂಥಾಲಯ ಕರ, ಹಳೇ ದಿನ ಪತ್ರಿಕೆಗಳ ಮಾರಾಟ, ಕಾನೂನಿನ ಮೇರೆಗೆ ವಿಧಿಸಲಾದ ದಂಡ, ಪುಸ್ತಕ ಬೆಲೆ ವಸೂಲಿ, ತಳಕು ಮಳಿಗೆಯಿಂದ ಬಂದ ಬಾಬ್ತು, ಸದಸ್ಯತ್ವ ಠೇವಣಿ ಹಾಗೂ ಇತರೆ ಮೂಲಗಳಿಂದ ಒಟ್ಟು 5.64 ಲಕ್ಷ ರೂ. ಆದಾಯ ಬಂದಿದೆ. ಅದರಲ್ಲಿ ಸಿಬ್ಬಂದಿ ವೇತನ ಹಾಗೂ ದೂರವಾಣಿ ವೆಚ್ಚ ಸೇರಿದಂತೆ ಒಟ್ಟು 29,275 ರೂ. ವೆಚ್ಚ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇ-ಸಾರ್ವಜನಿಕ ಗ್ರಂಥಾಲಯ: ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಓದುಗರಿಗೆ ಮನೆಯಲ್ಲಿಯೇ ಕುಳಿತು ಸ್ವಯಂ ಕಲಿಕೆಯ ಸೌಲಭ್ಯ ನೀಡುವುದರ ಮೂಲಕ ಓದುಗರಿಗೆ ವೈವಿಧ್ಯಮಯವಾದ ಪುಸ್ತಕಗಳನ್ನು ನೀಡಲು ಇ-ಸಾರ್ವಜನಿಕ ಗ್ರಂಥಾಲಯ ಎಂಬ ಮೊಬೈಲ್ ಆ್ಯಪ್ ಆರಂಭಿಸಲಾಗಿದೆ. ಇದರಲ್ಲಿ ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಮಕ್ಕಳ ಕಲಿಕೆಯ ವಿಡಿಯೋಗಳು, ಶೈಕ್ಷಣಿಕ ವಿಷಯದ ಪುಸ್ತಕಗಳು ಸೇರಿದಂತೆ ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿವೆ. ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿಂದ ಜೂನ್ 21 ರವರೆಗೆ ಒಟ್ಟು 4537 ಓದುಗರು ಇ-ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು. ಜಿಲ್ಲೆಯ 198 ಗ್ರಾಪಂ ಗ್ರಂಥಾಲಯಗಳ ಗ್ರಂಥಾಲಯದ ಸದಸ್ಯತ್ವ ಠೇವಣಿ ಹಣವನ್ನು ಅಂದಾಜು 1.95 ಲಕ್ಷ ರೂ. ಅನ್ನು ಗ್ರಾಮ ಪಂಚಾಯಿತಿಗಳಿಗೆ ಮರುಪಾವತಿಸಲಾಗಿದೆ. ಪಂಚಾಯತ್‌ರಾಜ್ ಇಲಾಖೆಯ ಸಂಬಂಧಪಟ್ಟ ಪಿಡಿಒಗಳಿಗೆ ಹಣ ವರ್ಗಾಯಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ| ಬಿ. ರಾಜಶೇಖರಪ್ಪ, ಜಿಪಂ ಮಾಜಿ ಅಧ್ಯಕ್ಷೆ ಜಿ.ಎಂ. ವಿಶಾಲಾಕ್ಷಿ ನಟರಾಜ್, ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಸದಸ್ಯ ಮುರುಗೇಶ್, ಚಳ್ಳಕೆರೆ ತಾಪಂ ಸದಸ್ಯ ಎಚ್. ಆಂಜನೇಯ, ನಿವೃತ್ತ ಪ್ರಾಚಾರ್ಯ ಎಚ್.ಲಿಂಗಪ್ಪ ಮತ್ತಿತರರು ಇದ್ದರು.