ಬೆಂಗಳೂರು: ಕೋವಿಡ್-19 ಪರಿಣಾಮ ಕೋರ್ಟ್ ಕಲಾಪಗಳು ಬಹುತೇಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಯೋಮಿತಿ ಪರಿಗಣಿಸದೆ ರಾಜ್ಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವಕೀಲರಿಗೆ ಸಹಾಯಧನ ಒದಗಿಸುವಂತೆ ಕರ್ನಾಟಕ ವಕೀಲರ ಪರಿಷತ್‌ಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ವಕೀಲ ಎಚ್.ಸಿ. ಶಿವರಾಮು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ್ ಹಾಗೂ ನ್ಯಾ. ಶಿವಶಂಕರ ಅಮರಣ್ಣನವರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ನಿರ್ದೇಶನ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಪರಿಷತ್ ಪರ ವಕೀಲರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣದ ಅಗತ್ಯವಿರುವ ವಕೀಲರಿಗೆ ನೆರವು ನೀಡಲು ಪರಿಷತ್ 2 ಕೋಟಿ ನೀಡಲಿದ್ದು, ಭಾರತೀಯ ವಕೀಲರ ಪರಿಷತ್ 45 ಲಕ್ಷ ಹಣ ನೀಡಿದೆ. ಹಿರಿಯ ವಕೀಲರಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಮಹಿಳಾ ವಕೀಲರ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, 10 ವರ್ಷದವರೆಗೆ ವೃತ್ತಿ ಅನುಭವ ಹೊಂದಿದ್ದು, ಸದ್ಯ ಹಣಕಾಸಿನ ಅಗತ್ಯವಿರುವ ವಕೀಲರಿಗೆ ಆರ್ಥಿಕ ನೆರವು ನೀಡಲು ಪರಿಷತ್ ನಿರ್ಧರಿಸಿದೆ. ಆದರೆ, ವಯೋಮಿತಿಯಿಲ್ಲದೆ ಹಣದ ಅಗತ್ಯವಿರುವ ಎಲ್ಲ ವಕೀಲರಿಗೆ ಆರ್ಥಿಕ ನೆರವು ನೀಡಬೇಕು. ಅಡ್ವೋಕೇಟ್ ಜನರಲ್, ಹಿರಿಯ ವಕೀಲರೊಂದಿಗೆ ಸಭೆ ನಡೆಸಿ ದೇಣಿಗೆ ಸಂಗ್ರಹಿಸಬೇಕು. ರಾಜ್ಯ ವಕೀಲರ ಪರಿಷತ್ ಹಾಗೂ ಭಾರತೀಯ ವಕೀಲರ ಪರಿಷತ್ ನೀಡುವ ಹಣವೂ ಸೇರಿ ಒಟ್ಟು ಸಂಗ್ರಹವಾದ ಮೊತ್ತದಿಂದ ವಕೀಲರಿಗೆ ಆರ್ಥಿಕ ನೆರವು ನೀಡಬೇಕು ಎಂದು ಸೂಚಿಸಿತು.
ವಕೀಲರ ಅರ್ಥಿಕ ನೆರವಿಗಾಗಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಕೀಲರ ಪರಿಷತ್ ಹಾಗೂ ಕೇಂದ್ರ ಸರ್ಕಾರಕ್ಕೆ ಭಾರತೀಯ ವಕೀಲರ ಪರಿಷತ್ ಮನವಿ ಸಲ್ಲಿಸಬೇಕು. ಆ ಮನವಿಯನ್ನು ಸರ್ಕಾರಗಳು ಪರಿಗಣಿಸಬೇಕು ಎಂದು ಇದೇ ವೇಳೆ ಹೈಕೋರ್ಟ್ ಸೂಚಿಸಿತು.