Advertisement

ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಿ

04:35 PM Jul 19, 2018 | Team Udayavani |

ಕಲಘಟಗಿ: ತಾಲೂಕಿನಾದ್ಯಂತ ಗ್ರಾಮೀಣ ಭಾಗದ ಯಾವೊಂದು ಮಗುವೂ ಸಮರ್ಪಕ ಸಂಚಾರ ವ್ಯವಸ್ಥೆಯಿಲ್ಲದೇ ವಿದ್ಯಾರ್ಜನೆಯಿಂದ ವಂಚಿತಗೊಳ್ಳುವುದನ್ನು
ತಾವು ಸಹಿಸುವುದಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿ ಕಾರಿಗೆ ಶಾಸಕ ಸಿ.ಎಂ. ನಿಂಬಣ್ಣವರ ಎಚ್ಚರಿಸಿದರು. ಪಟ್ಟಣದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ತಾಲೂಕಿನ ತಂಬೂರ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿರುವ ವಿಷಯ ತಿಳಿಯುತ್ತಿದ್ದಂತಲೇ ಸ್ಥಳಕ್ಕೆ ಆಗಮಿಸಿ ಎಲ್ಲರ ಅಹವಾಲುಗಳನ್ನು ಆಲಿಸಿದ ಶಾಸಕರು, ಬಸ್‌ ನಿಲ್ದಾಣದ ಸಾರಿಗೆ ನಿಯಂತ್ರಕ ಎಫ್‌.ಜಿ. ಹಿರೇಮಠ ಅವರಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಬಸ್‌ ಸಂಚಾರದ ವಸ್ತುಸ್ಥಿತಿ ಕೇಳಿದರು.

Advertisement

ಕೇಂದ್ರ ಸ್ಥಳದಿಂದ ಹಟಕಿನಾಳ, ಕೂಡಲಗಿ, ಸಂಗಮೇಶ್ವರ, ಮಸಳಿಕಟ್ಟಿ ಹಾಗೂ ಸೂಳಿಕಟ್ಟಿ ಗ್ರಾಮಗಳಿಗೆ ಹೋಗಿ ಬಂದಿರುವ ಬಸ್ಸೆ ತಂಬೂರಿಗೂ ಹೋಗಬೇಕಾಗಿದೆ. ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿರುವುದರಿಂದ ಸ್ವಲ್ಪ ತಡವಾಗುತ್ತಲಿದೆ ಎಂದರು. ಬೇರೆ ಬಸ್‌ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕೇವಲ ಈ ಭಾಗದಲ್ಲಿ ಮಾತ್ರವಲ್ಲದೇ ಇನ್ನುಳಿದ ಗ್ರಾಮಗಳಲ್ಲಿಯೂ ವಿದ್ಯಾರ್ಥಿಗಳು ಮಳೆ-ಗಾಳಿಯಲ್ಲಿಯೂ ಬಸ್‌ನ ಬಾಗಿಲಲ್ಲಿ ನಿಂತು ಹಾಗೂ ಮೇಲಕ್ಕೆ ಹತ್ತಿ ಬರಬೇಕಾದ ಅನಿವಾರ್ಯತೆ ಇದೆ ಎಂದು ಅನೇಕರು ಅವಲತ್ತುಕೊಂಡರು. ಬಸ್‌ಗಳು ತಡವಾಗಿ ತಾಲೂಕು ಕೇಂದ್ರ ಸ್ಥಳಕ್ಕೆ ಬರುವುದರಿಂದ ಶಾಲಾ ಸಮಯಕ್ಕೆ ಸರಿಯಾಗಿ ಬರಲಾಗುತ್ತಿಲ್ಲ. ಶಿಕ್ಷಕರೂ ಹೊರಗಡೆ ಕಳಿಸುತ್ತಾರೆ ಎಂದು ವಿದ್ಯಾರ್ಥಿಗಳು ನಿವೇದಿಸಿಕೊಂಡರು.

ತಕ್ಷಣ ಶಾಸಕ ನಿಂಬಣ್ಣವರ ಫೋನ್  ಮೂಲಕ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಅವರನ್ನು ಸಂಪರ್ಕಿಸಿ, ತಾಲೂಕಿನಾದ್ಯಂತ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚರಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಪರಶುರಾಮ ರಜಪೂತ, ವಿಜಯ ಬೆಣ್ಣಿ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ ಹಾಗೂ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next