ಗದಗ: ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಜನ-ಜಾನುವಾರು ಜೀವ ಹಾನಿಗೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಶೀಘ್ರ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಹೇಳಿದರು.
ನಗರದ ಡಿಸಿ ಕಚೇರಿ ವಿಡಿಯೋ ಸಭಾಂಗಣದಲ್ಲಿ ನಡೆದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‌ಟಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಯೋಜನೆಯಡಿ ನಿಯಮಾನುಸಾರ ಮನೆಹಾನಿ ಪ್ರಮಾಣ ಆಧರಿಸಿ ತಕ್ಷಣವೇ ಪರಿಹಾರ ನೀಡಬೇಕು. ಅದರಂತೆ ಅತಿವೃಷ್ಟಿಯಿಂದ ಜನ-ಜಾನುವಾರು ಜೀವಹಾನಿ ಸಂಭವಿಸಿದಲ್ಲಿ 24 ಗಂಟೆಯೊಳಗೆ ಪರಿಹಾರ ದೊರಕಿಸಿ ಕೊಡಲು ಅಧಿಕಾರಿ ವರ್ಗ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಮಳೆಗಾಲ ಆರಂಭವಾಗಿದ್ದು ಜನ-ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಆರೋಗ್ಯ ಇಲಾಖಾಧಿಕಾರಿಗಳು ಈ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಸಾಂಕ್ರಾಮಿಕ ರೋಗಗಳ ಹತೋಟಿಗೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾಲೂಕು ಆಡಳಿತಗಳು ನಿಯಮಿತವಾಗಿ ಟಾಸ್ಕ್ಫೋರ್ಸ್ ಸಮಿತಿ ಸಭೆ ಜರುಗಿಸಿ ಅತಿವೃಷ್ಟಿ ನಿರ್ವಹಣೆಗೆ ಮುಂದಾಗುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಹಾಗೂ ಶಾಲಾ-ಕಾಲೇಜು ಕಟ್ಟಡಗಳಲ್ಲಿ ತರಗತಿಗಳನ್ನು ನಡೆಸಬಾರದು. ಹಾಗೂ ಅಂತಹ ಕಟ್ಟಡಗಳ ಹತ್ತಿರ ಮಕ್ಕಳು ಸುಳಿಯದಂತೆ ಸಂಬಂಧಿತ ಇಲಾಖಾಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸುವಂತೆ ಹೇಳಿದರು.
ತಹಶೀಲ್ದಾರ್ ಕಚೇರಿ ನ್ಯಾಯಾಲಯ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಭೂ ಪರಿವರ್ತನೆ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಮುಗಿಸಬೇಕು. ಪಿಂಚಣಿ, ವೃದ್ದಾಪ್ಯ ವೇತನ, ಸಾಮಾಜಿಕ ಭದ್ರತಾ ಯೋಜನೆಗಳ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಮಾತನಾಡಿ, ಏಪ್ರಿಲ್ 1ರಿಂದ ಈವರೆಗೆ ವಾಡಿಕೆ ಮಳೆ 119 ಮಿ.ಮೀ ಇದ್ದು 267 ಮಿ.ಮೀ ಮಳೆಯಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ 905 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಪೈಕಿ 848 ಮನೆಗಳಿಗೆ ನಿಯಮಾನುಸಾರ 27.136 ಲಕ್ಷ ರೂ. ಪರಿಹಾರ ನೀಡಲಾಗಿದ್ದು ಉಳಿದಂತೆ ಸಮೀಕ್ಷೆ ಕಾರ್ಯ ಜರುಗುತ್ತಿದೆ. 49 ಜಾನುವಾರು ಜೀವಹಾನಿಯಾಗಿದ್ದು 3.21 ಲಕ್ಷ ರೂ. ಪರಿಹಾರ ನೀಡಲಾಗಿದೆ. 760 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. 13 ಟ್ರಾನ್ಸ್‌ಫರ್ಮರ್ ಹಾನಿಗೊಳಗಾಗಿದ್ದು, ಹೊಸ ಟ್ರಾನ್ಸ್‌ಫರ್ಮರ್ ಕಂಬಗಳನ್ನು ಅಳವಡಿಸಲಾಗಿದೆ. ಮೇ 1 ರಿಂದ ಜಿಲ್ಲೆಯಲ್ಲಿ 1 ಮಾನವ ಜೀವ ಹಾನಿಯಾಗಿದ್ದು ಪರಿಹಾರ ವಿತರಿಸಲಾಗಿದೆ ಎಂದರು. ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಗುರುಪ್ರಸಾದ, ಆಯಾ ತಾಲೂಕುಗಳ ತಹಶೀಲ್ದಾರರು, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ಕೃಷಿ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.