Advertisement

ಪರಿಹಾರ ನೀಡಿ ಕಾಮಗಾರಿ ಆರಂಭಿಸಿ

02:18 PM Sep 15, 2019 | Suhan S |

ರಾಮನಗರ: ಸುಮಾರು 2-3 ಕಿಮೀ ದೂರದಿಂದ ಬಿಂದಿಗೆಯಲ್ಲಿ ನೀರು ತಂದು ಪೋಷಿಸಿ ಮಾವಿನ ಮರಗಳನ್ನು ಬೆಳೆಸಿದ್ದೇವೆ. ರಾಕ್ಷಸ ಗಾತ್ರದ ಯಂತ್ರಗಳನ್ನು ತಂದು ಒಮ್ಮೆಗೆ ನೂರಕ್ಕೂ ಹೆಚ್ಚು ಮರಗಳನ್ನು ನೆಲಕ್ಕುರುಳಿಸಿದ್ದಾರೆ. ನಮ್ಮ ಕಣ್ಣೀರ ಕಥೆ ಕೇಳ್ಳೋರೇ ಇಲ್ಲ. ಅತ್ತ ಪರಿಹಾರವೂ ಇಲ್ಲ. ಇತ್ತ ಬದುಕು ಕಟ್ಟಿ ಕೊಟ್ಟಿದ್ದ ಮರಗಳು ಇಲ್ಲ – ಹೀಗೆ ಅಲವತ್ತುಕೊಂಡಿದ್ದು ವಿಜಯಪುರ ಗ್ರಾಮದ ಶಾರದಮ್ಮ.

Advertisement

ಶನಿವಾರ ಬೆಳಗ್ಗೆ ತಾಲೂಕಿನ ಜಯಪುರ, ವಿಜಯಪುರ ಗ್ರಾಮಗಳ ರೈತರು ಜಯಪುರ ಗೇಟ್ ಬಳಿ ಇರುವ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಯ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆ ದಿಲೀಪ್‌ ಬಿಲ್ಡ್ಕಾನ್‌ನ ಕ್ಯಾಂಪ್‌ ಸೈಟ್‌ಗೆ ಮುತ್ತಿಗೆ ಹಾಕಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ನೋವು ಅರ್ಥವಾಗಲೇ ಇಲ್ಲ: ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ರಾಮನಗರ ಬೈಪಾಸ್‌ ನಿರ್ಮಾಣಕ್ಕೆ ಯಾವುದೇ ಮುನ್ಸೂಚನೆ ನೀಡಿಲ್ಲ. ನೋಟಿಸ್‌ ಜಾರಿ ಮಾಡದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾವಿನ ಮರಗಳನ್ನು ಕತ್ತರಿಸಿ ಹಾಕಿದ್ದನ್ನು ಖಂಡಿಸಿ, ಸರ್ವೇ ನಡೆಸಿ ಪರಿಹಾರ ನೀಡಿದ ನಂತರವಷ್ಟೇ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

ಕಣ್ಣೆದುರಿಗೆ ಉರುಳುತ್ತಿದ್ದ ಮರಗಳನ್ನು ಕಂಡು ಸಹಿಸಲಾಗದೇ ಗೋಗೆರೆದು ಮನವಿ ಮಾಡಿದರು ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳಿಗೆ, ಸಿಬ್ಬಂದಿಗೆ ನಮ್ಮ ನೋವು ಅರ್ಥವಾಗಲೇ ಇಲ್ಲ. ಪರಿಹಾರ ಕೊಡುವ ತನಕವಾದರು ಮರಗಳನ್ನು ಉಳಿಸಿ ಎಂದು ಕಣ್ಣೀರಿಟ್ಟರೂ ಅವರ ಮನಸ್ಸು ಕರಗಲಿಲ್ಲ ಎಂದು ಆರೋಪಿಸಿದರು.

ನೋಟೀಸು ಇಲ್ಲ, ಪರಿಹಾರವೂ ಇಲ್ಲ!: ಕ್ಯಾಂಪ್‌ ಸೈಟ್‌ಗೆ ಮುತ್ತಿಗೆ ಹಾಕಿದ್ದ ರೈತರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳು ಸ್ಥಳಕ್ಕೆ ಬರುವ ವರೆಗೂ ಕದಲುವುದಿಲ್ಲ ಎಂದು ಧರಣಿ ಕುಳಿತರು.

Advertisement

ಸೈಟ್ನಿಂದ ಒಂದೇ ಒಂದು ವಾಹನವೂ ಆಚೆಗೆ ತೆರಳದಂತೆ ನಿಷೇಧವೊಡ್ಡಿದರು. ತಮಗಾಗಿರುವ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕು. ಸರ್ವೇ ಮುಂತಾದ ಕಾರ್ಯಗಳನ್ನು ನಡೆಸಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂದು ಪಟ್ಟು ಹಿಡಿದು ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಡಳಿತ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಹರಿಹಾಯ್ದರು.

ಕಾನೂನು ಪಾಲಿಸದವರ ವಿರುದ್ಧ ಕ್ರಮಕ್ಕೆ ಆಗ್ರಹ: ಯಾವುದೇ ನೋಟಿಸ್‌ ಜಾರಿ ಮಾಡದೇ ಪ್ರಾಧಿಕಾರ ತಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೊರಟಿದ್ದು ಅಕ್ಷಮ್ಯ ಒಂದೆಡೆಯಾದರೆ, ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿಯ ದೌರ್ಜನ್ಯ ಇನ್ನೊಂದೆಡೆ. 6 (1) ನೋಟಿಫಿಕೇಷನ್‌ ಆಗದೇ ಪ್ರಾಧಿಕಾರ ತಮ್ಮ ಭೂಮಿಯ ಮೇಲೆ ಕಾಲಿಡುವಂತೆಯೂ ಇಲ್ಲ. ಕಾನೂನು ಪಾಲಿಸದ ಪ್ರಾಧಿಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಕಳೆದ ವಾರ ಪ್ರಾಧಿಕಾರದ ಯೋಜನಾಧಿಕಾರಿಗಳನ್ನು ಭೇಟಿ ಮಾಡಿದಾಗ ಸರ್ವೇ ಮಾಡಿದ ನಂತರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ, ಶುಕ್ರವಾರ ಏಕಾಏಕಿ ಯಂತ್ರಗಳನ್ನು ತಂದು ತೊಂದರೆ ಕೊಟ್ಟಿದ್ದಾರೆ. ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ದೊರೆಯುವವರೆಗೂ ಕ್ಯಾಂಪ್‌ ಸೈಟ್ನಿಂದ ಒಂದೇ ಒಂದು ವಾಹನವನ್ನು ಹೊರಗೆ ಬಿಡೋಲ್ಲ ಎಂದು ಪಟ್ಟು ಹಿಡಿದರು.

ಯಾವ ರೈತರ ಎಷ್ಟು ಭೂಮೀ ಸ್ವಾಧೀನವಾಗಬೇಕಾಗಿದೆ. ಎಷ್ಟು ಮರಗಳು ಕತ್ತರಿಸಬೇಕಾಗಿದೆ ಎಂಬುದನ್ನು ಸರ್ವೇ ಮಾಡಿ ದಾಖಲೆ ಮಾಡಿಕೊಂಡು, ಪರಿಹಾರ ಕೊಟ್ಟು ನಂತರ ಕಾಮಗಾರಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನವೆಂಬರ್‌ನಲ್ಲಿ ಕಾಮಗಾರಿ ಆರಂಭ: ಪ್ರತಿಭಟನೆಯ ವಿಷಯ ತಿಳಿದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಯೋಜನಾಧಿಕಾರಿ ಶ್ರೀಧರ್‌ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿದರು. ಅಕ್ಟೋಬರ್‌ 15ರೊಳಗೆ ಸಲ್ಲ ಬೇಕಾದ ಪರಿಹಾರದ ಮೊತ್ತವನ್ನು ಸಲ್ಲಿಸಿದ ನಂತರ ನವೆಂಬರ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ವೆಂಕಟಸ್ವಾಮಿ, ಶ್ರೀನಿವಾಸ್‌ (ವಾಸು), ಪುಟ್ಟಸ್ವಾಮೀ ಗೌಡ, ವೆಂಕಟೇಶ್‌, ಚಿಕ್ಕವೆಂಕಟಪ್ಪ, ಬೋರೇಗೌಡ, ಶಿವಮಾದೇಗೌಡ, ತಮ್ಮಯ್ಯ, ಈರಪ್ಪ, ವೆಂಕಟಸ್ವಾಮಿ, ಸಿದ್ದಲಿಂಗಯ್ಯ, ಆನಂದ, ಮಂಚೇಗೌಡ, ಚಿಕ್ಕಮಾಧು, ಶಾರದಮ್ಮ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next