ಶರೀರದಲ್ಲಿ ನಾಲಿಗೆ “ಸರ್ವೋತ್ತಮ’ ಮತ್ತು “ಸರ್ವೋಪರಿ’ ಗೌರವವನ್ನು ಹೊಂದಿದೆ. ನಾಲಿಗೆ ತನ್ನ ಘನತೆ, ಗೌರವಗಳಿಗೆ ಅನುಗುಣವಾಗಿ ಹಿತಮಿತವಾಗಿ, ಗಂಭೀರವಾಗಿ ಮಾತನಾಡಿಕೊಂಡಿದ್ದರೆ, ಅದರ ಕೀರ್ತಿ ಹೆಚ್ಚುತ್ತದೆ. ನಾಲಿಗೆಯಲ್ಲಿ ಮಧು, ವಿಷಗಳೆರಡೂ ಇವೆ. “ಮಧು ತಿಷ್ಠತಿ ಜಿಹ್ವಾಗ್ರೇ’ ಎಂದು ಹೇಳುತ್ತಾರೆ. ವೇದಗಳಲ್ಲೂ “ಮಧು ವಕ್ಷ್ಯಾಮಿ, ಮಧು ವದಿಷ್ಯಾಮಿ, ಮಧುಮತೀಂ ವಾಚಮುದ್ಯಾಸಗ್‌ಂ’ ಎಂದು ಋಷಿಮುನಿಗಳು ಹೇಳಿದ್ದಾರೆ.
ಆಹಾರಪದ್ಧತಿಯಲ್ಲಿ ಹಿತಭುಕ್, ಮಿತಭುಕ್, ಋತುಭುಕ್ ಎಂದು ಹೇಳಿದ ಹಾಗೆ, ನಾವಾಡುವ ಮಾತುಗಳಲ್ಲೂ ಜ್ಞಾನಿಗಳು ಮೂರು ಪ್ರಕಾರಗಳ ಪ್ರಸ್ತಾಪ ಮಾಡಿದ್ದಾರೆ: ಋತವಾಕ್, ಮಿತವಾಕ್, ಹಿತವಾಕ್… ಎಂದು. 1. ನಾವಾಡುವ ಮಾತುಗಳಲ್ಲಿ ಸತ್ಯವಿರಬೇಕು. 2. ನಾವಾಡುವ ಮಾತುಗಳು, ಇತಿಮಿತಿಯಲ್ಲಿರಬೇಕು. 3. ನಾವಾಡುವ ಮಾತುಗಳಲ್ಲಿ ಸ್ವಹಿತ, ಪರಹಿತದೊಂದಿಗೆ ಸರ್ವಜನಹಿತವಿರಬೇಕು…
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹಿತಮಿತವಾದ ಮಾತುಗಳಿಗೆ “ವಾಙ್ಮಯ ತಪಸ್ಸು’ ಎಂದು ಕರೆದಿದ್ದಾನೆ. ಆತ ಗೀತೆಯಲ್ಲಿ ಹೇಳುತ್ತಾನೆ, “ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್| ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ||’ ಎಂದು.
ಹಿಂದೀ ಭಾಷೆಯಲ್ಲಿ ಒಂದು ಲೋಕೋಕ್ತಿ ಇದೆ- “ಗೋಲೀ ಕಾ ಘಾವ್ ಭರ್ ಸಕತಾ ಹೈ| ಪರಂತು ಬೋಲೀ ಕೀ ಚೋಟ್ ಹಮೇಶಾ ಕೇ ಲಿಯೇ ಸತಾತೀ ಹೈ’ ಎಂದು. ಗುಂಡಿನಿಂದಾದ ಗಾಯವು ಬೇಗನೆ ಗುಣವಾಗುತ್ತದೆ. ಮಾತಿನಿಂದಾದ ಗಾಯವು ಆಜೀವನದುದ್ದಕ್ಕೂ ಗುಣವಾಗುವುದೇ ಇಲ್ಲ. ಇದು ಕಾರಣವಾಗಿ, ನಾವು ನಮ್ಮ ನಾಲಿಗೆಯಿಂದ ಹೊರಹಾಕುವ ಪ್ರತಿಯೊಂದು ಪದ, ಶಬ್ದದ ಮೇಲೆ ನಮ್ಮ ಗಮನವಿರಬೇಕು.
“ಅಕ್ಕಸಾಲಿಗನ ನೂರೇಟಿಗೆ ಕಮ್ಮಾರನ ಒಂದೇಟು ಸಮ’ ಎಂದು ಹೇಳುವ ಹಾಗೆ, ನಾವು ಸಾವಿರ ಕೈಗಳಿಂದ ಒಳ್ಳೆಯದನ್ನು ಮಾಡಿದರೂ, ನಮ್ಮ ನಾಲಿಗೆಯಿಂದ ಹೊರಬರುವ ಒಂದೇ ಒಂದು ಕೆಟ್ಟಮಾತು ಎಲ್ಲವನ್ನೂ ಹಾಳುಮಾಡುತ್ತದೆ. ಅಷ್ಟು ಮಾತ್ರವಲ್ಲ, ಅಂಥದೊಂದು ಮಾತು, ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ ಇರುವ ಜನಗಳ ಬಾಳಿಗೆ ಮುಳ್ಳಾಗಿ ನಿಂತುಕೊಳ್ಳುತ್ತದೆ. ಮಾತು ಮಂದಾರವಾದರೆ, ಮನಸ್ಸು ತನ್ನಷ್ಟಕ್ಕೆ ತಾನೇ ಶೃಂಗಾರದ ಹಂದರವಾಗುತ್ತದೆ.
“ಮಾತಿನಿಂದಲೇ ಇಹವು, ಮಾತಿನಿಂದಲೇ ಪರವು’, “ಮುತ್ತು ಒಡೆದರೆ ಹೋಯ್ತು; ಮಾತು ಆಡಿದರೆ ಹೋಯ್ತು’ ಎಂದು ಹಿರಿಯರು ಹೇಳಿದ್ದಾರೆ. ಈ ಮಾತುಗಳನ್ನು ಸದಾ ಜ್ಞಾಪಿಸಿಕೊಳ್ಳುತ್ತಾ, ಮಾತುಗಳ ಬಳಕೆಯ ವಿಚಾರದಲ್ಲಿ ಎಚ್ಚರ ವಹಿಸೋಣ.
* ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ತುಮಕೂರು