ಮೈಸೂರು: 15 ವರ್ಷಗಳಿಂದ ಈಚೆಗೆ ನಗರದಲ್ಲಿ ಪಾಲಿಕೆ ಸದಸ್ಯರು, ಮೇಯರ್‌ಗಳು ಹಾಗೂ ವಕ್ಫ್ ಕಮಿಟಿ ಅಧ್ಯಕ್ಷರಾಗಿದ್ದವರು ತಾವು ಕಟ್ಟಿರುವ ಮನೆ, ವಾಣಿಜ್ಯ ಕಟ್ಟಡಗಳು ಪಾಲಿಕೆ ನಿಯಮಗಳ ಪ್ರಕಾರವೇ ಇದೆ, ಯಾವುದೇ ಅಕ್ರಮ ಮಾಡಿಲ್ಲ ಎಂದು ದಾಖಲೆ ಸಮೇತ ಸಾಬೀತು ಪಡಿಸಿದರೆ ನಾನು ಪಾಲಿಕೆ ಸದಸ್ಯರು ಮತ್ತು ಮೇಯರ್ ವಾದ ಒಪ್ಪುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಮಹಾನಗರ ಪಾಲಿಕೆ ಸದಸ್ಯರಿಗೆ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಪಾಲಿಕೆ ನಿಯಮಗಳ ಅನುಸಾರವೇ ನಾವು ಕಟ್ಟಡಗಳನ್ನು ಕಟ್ಟಿದ್ದೇವೆ, ಅಕ್ರಮ ಮಾಡಿಲ್ಲ, ಸಿಆರ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರೆ, ನಾನೇ ಖುದ್ದು ಸ್ಥಳ ಪರಿಶೀಲಿಸುತ್ತೇನೆ. ತಪ್ಪು ಮಾಡಿರುವವರು ಸಾರ್ವಜನಿಕವಾಗಿ ತಪ್ಪೊಪ್ಪಿಕೊಳ್ಳಲಿ. ರಾಜೀನಾಮೆ ಕೊಡುವುದು ಬೇಡ. ಮುಂದಕ್ಕೆ ಯಾರ ಬಳಿಯೂ ಹಣ ವಸೂಲಿ ಮಾಡಬಾರದು ಎಂದು ಎಚ್ಚರಿಸಿದರು.
ತೊಂದರೆ ನೀಡಬೇಡಿ: ಮಹಾಪೌರರು, ನಗರಪಾಲಿಕೆ ಸದಸ್ಯರು ವಿನಾಕಾರಣ ಅಧಿಕಾರಿಗಳನ್ನು ಕರೆದುಕೊಂಡು ಕಟ್ಟಡ ಕಟ್ಟುತ್ತಿರುವ ಸ್ಥಳಗಳಿಗೆ ಹೋಗಬಾರದು. ಅಧಿಕಾರಿಗಳು ಬೇಕಾದರೆ ತಾವೇ ಖುದ್ದಾಗಿ ಹೋಗಿ ಪರಿಶೀಲಿಸಲಿ. ಆದರೆ ಈ ವಿಚಾರದಲ್ಲಿ ಸದಸ್ಯರ ಮಾತು ಕೇಳುವುದು ಬೇಡ. ಯಾರಾದರೂ ತೊಂದರೆ ಕೊಡುತ್ತಿದ್ದಾರೆ ಎಂದರೆ ಜನರು ನನಗೆ, ಪಾಲಿಕೆ ಆಯುಕ್ತರಿಗೆ ದೂರು ನೀಡಬಹುದು. ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಎಷ್ಟು ಕಂದಾಯ ಸಂಗ್ರಹವಾಗಬೇಕು, ಎಷ್ಟು ಸಂಗ್ರಹವಾಗಿದೆ ಹಾಗೂ ತಮ್ಮ ವಾರ್ಡ್‌ಗಳಿಗೆ ಬಿಡುಗಡೆಯಾಗಿರುವ ಹಣವನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ದಾಖಲೆ ಸಮೇತ ತೋರಿಸಲಿ ಎಂದು ಸವಾಲು ಹಾಕಿದರು.
ಲೆಕ್ಕ ಕೊಡಿ: ನಾಲ್ಕು ವರ್ಷಗಳಲ್ಲಿ 800 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಅದನ್ನೆಲ್ಲಾ ಯಾವುದಕ್ಕೆ ಬಳಸಿದ್ದಾರೆ ಎಂದು ಲೆಕ್ಕ ನೀಡಲಿ. ಮಾಡಿದ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾರೆ. ಇದರ ಬಗ್ಗೆ ಕೌನ್ಸಿಲ್ ಸಭೆಗೆ ಬಂದು ಮಾತನಾಡಿ ಎನ್ನುತ್ತಾರೆ. ಅಲ್ಲಿ ಹೋದರೆ ಗಲಾಟೆ ಬಿಟ್ಟರೆ ಮತ್ತೇನೂ ಇರುವುದಿಲ್ಲ ಎಂದು ದೂರಿದರು.
ಸಹಾಯವಾಣಿ: ನಗರಪಾಲಿಕೆಯಿಂದ ಒಂದು ಸಹಾಯವಾಣಿ ಆರಂಭಿಸೋಣ. ನಗರದ ಜನರು ವಸತಿ, ವಾಣಿಜ್ಯ ಕಟ್ಟಡಗಳು ನಿರ್ಮಿಸುವಾಗ ವಕ್ಫ್ ಕಮಿಟಿ ಅಥವಾ ಪಾಲಿಕೆ ಸದಸ್ಯರು ಬಂದು ಹಣ ವಸೂಲಿ ಮಾಡಿದರೆ ಆ ಸಹಾಯವಾಣಿಗೆ ದೂರು ನೀಡಲಿ. ಆಗ ಎಷ್ಟು ದೂರುಗಳು ಬರುತ್ತವೆ ನೋಡಿದರೆ ಇವರು ಮಾಡಿರುವ ತಪ್ಪು ಎಲ್ಲರಿಗೂ ತಿಳಿಯುತ್ತದೆ ಎಂದು ಚಾಟಿ ಬೀಸಿದರು.