Advertisement

ಸಾಂಪ್ರದಾಯಿಕ ಮರಿಕೆ ಕಟ್ಟ ರಾಜ್ಯಕ್ಕೆ ಮಾದರಿ 

08:40 AM Sep 14, 2017 | |

ಪುತ್ತೂರು: ಕಡಿಮೆ ಖರ್ಚಿನಲ್ಲಿ ನಿರ್ಮಿಸಿದ ತೋಡಿನ ಕಟ್ಟದ ಸುಧಾರಿತ ಮಾದರಿ ಈಗ ರಾಜ್ಯದ ಗಮನ ಸೆಳೆದಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮರಿಕೆ ಎಂಬ ಪುಟ್ಟ ಗ್ರಾಮದ ಕೃಷಿಕರ ತೋಡಿನ ಕಟ್ಟವನ್ನು ಮಾದರಿಯಾಗಿಟ್ಟುಕೊಂಡು ಉದ್ಯೋಗ ಖಾತ್ರಿ ಯೋಜನೆಗೆ ಸೇರಿಸಿಕೊಳ್ಳಲಾಗಿದೆ.

Advertisement

ಇದುವರೆಗೆ ಉದ್ಯೋಗ ಖಾತ್ರಿಯಡಿ ತೋಡಿನ ಕಟ್ಟದ ಕಾಮಗಾರಿ ನಡೆಸಲು ಅವಕಾಶ ಇರಲಿಲ್ಲ. ಕಾರಣ ಇದು ಸುಸ್ಥಿರ ಆಸ್ತಿಯನ್ನು ಸೃಜಿಸುವುದಿಲ್ಲ ಎಂಬ ಕಾರಣಕ್ಕೆ. ಆದರೆ ಇದೇ ಮೊದಲ ಬಾರಿಗೆ ತೋಡಿನ ಕಟ್ಟವನ್ನು ನರೇಗಾದಡಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಕಾರಣವಾದದ್ದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮರಿಕೆ ಎಂಬಲ್ಲಿ ತೋಡಿಗೆ ನಿರ್ಮಿಸಿದ ಶಾಶ್ವತ ಕಟ್ಟ ರಚನೆ. ಅಂದರೆ ಇದು ಸುಸ್ಥಿರ ಆಸ್ತಿಯನ್ನು ಸೃಜಿಸುತ್ತದೆ ಎಂದು ಸಾಬೀತಾಗಿದೆ.

ಹಳ್ಳಿ ತೋಡುಗಳಿಗೆ ಸಾಮಾನ್ಯವಾಗಿ ಮಣ್ಣಿನ ಕಟ್ಟ ನಿರ್ಮಿಸಲಾಗುತ್ತದೆ. ಮಳೆ ಕಡಿಮೆಯಾಗುತ್ತಿದ್ದಂತೆ ಉಳಿಕೆ ನೀರನ್ನು ಸಂಗ್ರಹಿಸಿ ತೋಟಗಳಿಗೆ ಹಾಯಿಸುವ ಸುಲಭ ಉಪಾಯವಿದು. ಪ್ರತಿ ವರ್ಷ ಕಟ್ಟ ರಚನೆ ಮಾಡಬೇಕು. ಮಣ್ಣು ಅಥವಾ ಮರಳಿನ ಗೋಣಿ ಚೀಲ, ಕೂಲಿ ಕೆಲಸ ಪ್ರತಿ ವರ್ಷ ತಪ್ಪಿದಲ್ಲ. ಇದಕ್ಕೆ ಪರ್ಯಾಯವಾಗಿ ಮಣ್ಣಿನ ಜಾಗದಲ್ಲಿ ಕಬ್ಬಿಣ, ಕಾಂಕ್ರೀಟ್‌, ಟರ್ಪಾಲ್‌ ಬಳಸಿಕೊಂಡರೆ ಹೇಗೆ? ಈ ಆಲೋಚನೆ ಮರಿಕೆಯ ಪ್ರಗತಿಪರ ಕೃಷಿಕ ಎ.ಪಿ. ಸದಾಶಿವ ಅವರ ತಲೆಯಲ್ಲಿ ಸುಳಿಯುತ್ತಲೇ ಜಾರಿಗೆ ತಂದೇ ಬಿಟ್ಟರು.

ಹಲವು ದಶಕಗಳಿಂದ ಇದೇ ಜಾಗದಲ್ಲಿ ತೋಡಿಗೆ ಕಟ್ಟ ನಿರ್ಮಿಸುತ್ತಿದ್ದರು. ಪರಿಣಾಮ ಒಂದು ಭಾಗ ಗುಡ್ಡದ ಮಣ್ಣು ಸಂಪೂರ್ಣ ಖಾಲಿಯಾಗಿತ್ತು. ಗುಡ್ಡ ಸಮತಟ್ಟು ಜಾಗವಾಗಿ ಪರಿವರ್ತನೆಯಾಯಿತು. ಪ್ರತಿವರ್ಷ ಮಣ್ಣು ಅಗೆಯುವುದೇ ಕೆಲಸ. ಮಾತ್ರವಲ್ಲ ಹರಿಯುವ ನೀರಿನ ರಭಸಕ್ಕೆ ಸಣ್ಣ ಕಟ್ಟ ಸಾಲದು. ಆದ್ದರಿಂದ ಸುಸಜ್ಜಿತ ಕಟ್ಟ ನಿರ್ಮಿಸಲು ಆರೇಳು ಕೂಲಿಯಾಳುಗಳು ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೂಲಿಯಾಳು ಸಮಸ್ಯೆ ಇದೆ. ಆದ್ದರಿಂದ ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಮಾತ್ರವಲ್ಲ ಶಾಶ್ವತವಾಗಿ ಉಳಿಯುವ ಪುಟ್ಟ ಅಣೆಕಟ್ಟು ನಿರ್ಮಿಸಿಯೇ ಬಿಟ್ಟರು. ಇದು ಶಾಶ್ವತ ಬಳಕೆಗೂ ಲಭ್ಯವಾಯಿತು.

ಕಳೆದ ನಾಲ್ಕು ವರ್ಷಗಳಿಂದ ಮರಿಕೆಯಲ್ಲಿ ಎ.ಪಿ. ಸದಾಶಿವ ಅವರು ಬಳಸುತ್ತಿದ್ದ ಕಟ್ಟ ಜನಪ್ರಿಯವಾಯಿತು. ಜಿಲ್ಲಾ ಪಂಚಾಯತ್‌ನ ಗಮನವನ್ನು ಸೆಳೆಯಿತು. ಪರಿಣಾಮ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಂಡ ಮಾತ್ರವಲ್ಲ ಉದ್ಯೋಗ ಖಾತ್ರಿಯ ಆಯುಕ್ತ ಉಪೇಂದ್ರ ಪ್ರತಾಪ್‌ ಸಿಂಗ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಉದ್ಯೋಗ ಖಾತ್ರಿಯಡಿ ಜಾಬ್‌ ಕಾರ್ಡ್‌ ಪಡೆದುಕೊಂಡ ಫಲಾನುಭವಿಗಳು, ಜಿ.ಪಂ.ನಿರ್ದೇಶನದಂತೆ ಸುಧಾರಿತ ಕಟ್ಟ ನಿರ್ಮಿಸಬಹುದು. ಇದಕ್ಕೆ 90ರಿಂದ 95 ಸಾವಿರ ರೂ.ವರೆಗೆ ಕೂಲಿ ರೂಪದಲ್ಲಿ ಹಣ ನೀಡಲಾಗುತ್ತದೆ. ಖರೀದಿಸಿದ ಸಾಮಗ್ರಿಯ ಬಿಲ್‌ ನೀಡಬೇಕು.

ಉದ್ಯೋಗ ಖಾತ್ರಿಯಡಿ…
ಎ.ಪಿ. ಸದಾಶಿವ ಅವರು ನಿರ್ಮಿಸಿದ ಕಟ್ಟವನ್ನು ಎಂಜಿನಿಯರ್‌ಗಳು ಒಂದಷ್ಟು ಸುಧಾರಣೆ ಮಾಡಿದರು. ಸುಮಾರು 50 ಸಾವಿರ ರೂ.ನೊಳಗಿನ ಖರ್ಚು ಲಕ್ಷದವರೆಗೂ ಏರಿಸಲಾಯಿತು. ತೋಡಿನ ಎರಡು ಬದಿಗೂ ಕಾಂಕ್ರೀಟ್‌ ಗೋಡೆ ನಿರ್ಮಿಸಲಾಗುತ್ತದೆ. ಇದು ಮೂಲ ಮಾದರಿಗಿಂತ ಒಂದಷ್ಟು ಸುಧಾರಿತ ಮತ್ತು ಶಾಶ್ವತ. ತೋಡು ಸಮತಟ್ಟಾಗಿದ್ದಾರೆ, ಸುಮಾರು 1 ಕಿಲೋ ಮೀಟರ್‌ವರೆಗೂ ನೀರನ್ನು ತಡೆ ಹಿಡಿಯಬಹುದು ಎನ್ನುತ್ತಾರೆ ತಜ್ಞರು.

ಹೇಗಿದೆ ಮರಿಕೆ ಸಾಂಪ್ರದಾಯಿಕ ಕಟ್ಟ ?
ಕಟ್ಟ ನಿರ್ಮಿಸುವ ಜಾಗದ ತಳಭಾಗದಲ್ಲಿ ಹೆಚ್ಚು ಹೊಂಡ ಆಗದಂತೆ ಕಾಂಕ್ರೀಟ್‌ ಲೇಪನ ಹಾಕಲಾಗಿದೆ. ಇದರ ದಪ್ಪ ಸುಮಾರು 4 ಇಂಚು. ಕಟ್ಟ ನಿರ್ಮಾಣವಾದ ಬಳಿಕ ತಳಭಾಗದಿಂದ ನೀರು ಸೋರಿಕೆಯಾಗುವುದನ್ನು ಮತ್ತು ಮಣ್ಣಿನ ಸವಕಳಿಯನ್ನು ಇದು ತಡೆಯುತ್ತದೆ. ತೋಡಿನ ಎರಡು ಭಾಗದ ಗೋಡೆಯನ್ನು ಸಿಮೆಂಟ್‌ನಿಂದ ಗಟ್ಟಿಗೊಳಿಸಿ, ಕಬ್ಬಿಣದ ಜಿಐ ಪೈಪ್‌ ಅಳವಡಿಸಲಾಗುತ್ತದೆ. ಇದು ತೋಡಿಗೆ ಅಡ್ಡವಾಗಿರುತ್ತದೆ. ಇದಕ್ಕೆ ತಗಡು ಶೀಟನ್ನು ಇಡಲಾಗುತ್ತದೆ.

ನಾಲ್ಕು ಅಡಿಯ ತಗಡು ಶೀಟ್‌ಗಳಲ್ಲಿ ಎರಡರ ಗಾತ್ರ 3 ಅಡಿ. ಇದು ಹೆಚ್ಚಿನ ನೀರನ್ನು ಮುಂದಕ್ಕೆ ಕಳುಹಿಸಲು ಅನುಕೂಲ. ತಗಡು ಶೀಟ್‌ನ ಸೆರೆಯಿಂದ ನೀರು ಸೋರಿಕೆಯಾಗದಂತೆ ಟರ್ಪಾಲು ಹೊದೆಸಲಾಗುತ್ತದೆ. ಟರ್ಪಾಲಿಗೆ ಆಸರೆಯಾಗಿ ತಗಡು ಶೀಟ್‌, ತಗಡು ಶೀಟನ್ನು ಆಧಾರವಾಗಿ ಜಿಐ ಪೈಪ್‌ ಹಿಡಿದಿಟ್ಟುಕೊಳ್ಳುತ್ತದೆ. ತಳಭಾಗದಿಂದ ಜಿಐ ಪೈಪು ಜಾರಿ ಹೋಗದಂತೆ ತಡೆಯಲು ಅನುಕೂಲವಾಗುವಂತೆ ಕಾಂಕ್ರೀಟ್‌ ಹಾಸಲಾಗುತ್ತದೆ. ಮತ್ತೂಂದು ಮಳೆಗಾಲ ಆರಂಭವಾಗುತ್ತಿದ್ದಂತೆ, ಟಾರ್ಪಾಲು ತೆಗೆದು, ಶೀಟ್‌ ಸರಿಸಿದರೆ ಹರಿವ ನೀರು ಸುಗಮವಾಗಿ ಹರಿದು ಹೋಗುತ್ತದೆ. ಇದು ಮರಿಕೆ ಎ.ಪಿ. ಸದಾಶಿವ ಅವರು ನಿರ್ಮಿಸಿದ ಮಾದರಿ. ಇದರ ವೆಚ್ಚ ಸುಮಾರು 40 ಸಾವಿರ ರೂ.

ಗ್ರಾಮೀಣ ಭಾಗದಲ್ಲಿ ತಾನು ನಿರ್ಮಿಸಿದ ಕಟ್ಟ ರಾಜ್ಯಕ್ಕೆ ಮಾದರಿ ಆಗಿರುವುದು ಖುಷಿ ತಂದಿದೆ. ಮೊದಲಿಗೆ ಅಡಕೆ ಮರವನ್ನು ಬಳಸಿಕೊಂಡು ಕಟ್ಟ ನಿರ್ಮಿಸಿದೆ. ಇತ್ತೀಚೆಗೆ ನಾಲ್ಕು ವರ್ಷದಿಂದ ಕಬ್ಬಿಣದ ಪೈಪನ್ನು ಬಳಸಿ ಕಟ್ಟ ನಿರ್ಮಿಸಿದ್ದೇನೆ. ಇನ್ನಷ್ಟು ಜನ ಇದನ್ನು ಮಾದರಿಯಾಗಿಟ್ಟುಕೊಂಡು, ಹರಿಯುವ ನೀರನ್ನು ಹಿಡಿದಿಟ್ಟು
ಕೊಳ್ಳುವ ಕೆಲಸ ಮಾಡುವಂತಾಗಲಿ.
 - ಎ.ಪಿ. ಸದಾಶಿವ ಮರಿಕೆ, 
ಪ್ರಗತಿಪರ ಕೃಷಿಕ

ನೀರಿನ ಕಟ್ಟ ಸುಸ್ಥಿರ ಆಸ್ತಿಯನ್ನು ಸೃಜಿಸದ ಕಾರಣ ಇದುವರೆಗೆ ನರೇಗಾದಡಿ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡದ ಮರಿಕೆಯ ಸಾಂಪ್ರದಾಯಿಕ ಕಟ್ಟ ನರೇಗಾದಡಿ ಬರುತ್ತಿದೆ. ಇದನ್ನು ಗುಡ್ಡ ಪ್ರದೇಶಗಳಿರುವ ಜಿಲ್ಲೆಗಳು ಅಂದರೆ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಮಡಿಕೇರಿ ಮೊದಲಾದ ಪ್ರದೇಶಗಳಲ್ಲಿ ಜಾರಿಗೆ ತರಬಹುದು. ಆದರೆ ಇದನ್ನು ದಕ್ಷಿಣ ಕನ್ನಡ ಮೊದಲಿಗೆ ಜಾರಿಗೆ ತಂದಿದೆ. ಈಗಾಗಲೇ ಸಾಕಷ್ಟು ತರಬೇತಿ ನೀಡಲಾಗಿದೆ.
– ಡಾ| ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ,  ಜಿ.ಪಂ. ದ.ಕ.

– ಗಣೇಶ್‌ ಎನ್‌. ಕಲ್ಲಪೆì

Advertisement

Udayavani is now on Telegram. Click here to join our channel and stay updated with the latest news.

Next