ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ನಂತರ ನಡೆದ ಗಲಾಟೆಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಬಾಲಕಿ ಸಾವನಪ್ಪಿರುವ ಘಟನೆಯನ್ನು ಖಂಡಿಸಿ ನಗರದ ಜಿಲ್ಲಾಸ್ಪತ್ರೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಬಾಲಕಿಯ ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಲಾಗಿದೆ.
ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ವಿಜಯೋತ್ಸವದ ಸಂದರ್ಭದಲ್ಲಿ ಗೆದ್ದ ಅಭ್ಯರ್ಥಿ ರಾಜು ತಳವಾರ ಮತ್ತು ಸೋತ ಅಭ್ಯರ್ಥಿ ಸಂತೋಷ ತಳವಾರ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿತ್ತು.
ನಂತರ ಸೋತ ಅಭ್ಯರ್ಥಿ ಸಂತೋಷ್, ಆತನ ಸಹೋದರ ರವಿ ಮತ್ತು ಅತ್ತಿಗೆ ಸಂಗೀತಾ ಸೇರಿ 10 ಜನರನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ತಾಯಿಯೊಂದಿಗೆ ಮೂರು ವರ್ಷದ ಬಾಲಕಿ ಭಾರತಿಯನ್ನೂ ಜೈಲಿಗೆ ಕಳುಹಿಸಲಾಗಿತ್ತು. ಆ ಬಳಿಕ ಜೈಲಿನಲ್ಲಿದ್ದ ಬಾಲಕಿ ಅಸ್ವಸ್ಥಗೊಂಡಿದ್ದು, ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಆಕೆ ಶನಿವಾರ ಮೃತಪಟ್ಟಿದ್ದಳು.
ಇದನ್ನೂ ಓದಿ:ಅಚ್ಚುಕಟ್ಟುತನದಿಂದ ಕಾರ್ಯ ನಿರ್ವಹಿಸಿ: ಡಿಸಿ
ಈ ಹಿನ್ನೆಲೆಯಲ್ಲಿ ಬಾಲಕಿ ಸಾವಿಗೆ ಪೊಲೀಸರೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಸಂಗೀತಾ ಅವರಿಗೆ ಪೊಲೀಸರು ಥಳಿಸಿದ್ದಾರೆ. ಈ ವೇಳೆಯಲ್ಲಿ ಬಾಲಕಿ ಭಾರತಿಗೂ ಪೆಟ್ಟಾಗಿತ್ತು. ಹೀಗಾಗಿ ಬಾಲಕಿ ಸಾವಿಗೆ ಪೊಲೀಸರೇ ಕಾರಣವಾಗಿದ್ದು, ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಬೇಕೆಂದು ಬಾಲಕಿ ಕುಟುಂಬದವರು ಮತ್ತು ಕೋಲಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ ಹಾಗೂ ರಸ್ತೆಯಲ್ಲಿಯೇ ಬಾಲಕಿ ಶವ ಇಟ್ಟು ರಸ್ತೆ ತಡೆ ನಡೆಸಿದ್ದಾರೆ.