ಬಸವನಬಾಗೇವಾಡಿ: ಕಾನ್ಯಾಳ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ತಡೆದು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಣಕಾಲ ಗ್ರಾಪಂ ವ್ಯಾಪ್ತಿಯ ಕಾನ್ಯಾಳ ಗ್ರಾಮಸ್ಥರಿಗೆ ಕುಡಿವ ನೀರು ಪೂರೈಸುವಂತೆ ಒತ್ತಾಯಿಸಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಬೆಳಗ್ಗೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮಧ್ಯಾಹ್ನ ಬಸವೇಶ್ವರ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು.
ಖಾಲಿ ಕೊಡ ಹೊತ್ತುಕೊಂಡು ಮಹಿಳೆಯರು ಬಸವೇಶ್ವರ ವೃತ್ತದಿಂದ ತಾಪಂ ಕಚೇರಿವರೆಗೆ ಪ್ರತಿಭಟನೆ ನಡೆಸಿ ಕಚೇರಿ ಎದುರಿನ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ವ್ಯಕ್ತಿಯೊಬ್ಬರು ಕಾನ್ಯಾಳ ಗ್ರಾಮಕ್ಕೆ ಪೂರೈಸುವ ಕುಡಿವ ನೀರಿನ ಕೊಳವೆಬಾವಿ ಬಂದ್ ಮಾಡಿದ್ದು, ಆ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಿ ಸಾರ್ವಜನಿಕರಿಗೆ ನೀರು ಪೂರೈಸಬೇಕೆಂದು ಹಲವಾರು ದಿನಗಳಿಂದ ಹೇಳಿದರೂ ತಾಪಂ ಹಾಗೂ ಗ್ರಾಪಂ ಅಧಿ ಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ತಕ್ಷಣ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ನೀರು ಪೂರೈಸಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಾಪಂ ಕಚೇರಿ ಎದುರು ಸಂಜೆವರೆಗೂ ಧರಣಿ ನಡೆಸಿದರು.
ಈ ವೇಳೆ ಗ್ರಾಮಸ್ಥರಾದ ಮಾದೇವಿ ಯರಝರಿ, ಲಕ್ಕವ್ವ ಮೇಲಿನಮನಿ, ಕಾಂತವ್ವ ನಾಟಿಕಾರ, ಸುವರ್ಣ ಮೇಲಿನಮನಿ, ಅಲಾಬಿ ಗುಂಡ್ನಾಳ, ಜನ್ನತಬಿ ಚಪ್ಪರಬಂದ್, ಅಲಾಬಿ ಚಪ್ಪರಬಂದ, ಗುರುಬಾಯಿ ನಾಟಿಕಾರ, ಈರವ್ವ ಕಲಬುರ್ಗಿ, ಲಕ್ಷ್ಮವ್ವ ಮ್ಯಾಗಿನಮನಿ, ಇಬ್ರಾಹಿಂ ಬೀಳಗಿ, ಸಿದ್ದಪ್ಪ ಹೂಗಾರ, ಸಂಗಪ್ಪ ಸಜ್ಜನ, ರವಿ ವಡ್ಡರ, ಸಿದ್ದಪ್ಪ ಮಾದರ, ಅರವಿಂದ ಹೂಗಾರ, ಮಹಾಂತೇಶ ನಾಟಿಕಾರ, ಸಾಹೇಬಗೌಡ ಮೇಟಿ, ಉಮೇಶ ವಾಲೀಕಾರ, ಶಾಹಿರಬಾನು ಚಪ್ಪರಬಂದ ಸೇರಿದಂತೆ ಇತರರಿದ್ದರು.