Advertisement

ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

12:29 PM Aug 14, 2018 | Team Udayavani |

ರಾಯಚೂರು: ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಸಂವಿಧಾನ ಉಳಿಸಿ ಕರ್ನಾಟಕ ನೇತೃತ್ವದಲ್ಲಿ ವಿವಿಧ ಸಂಘಟನೆಗಳ
ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕುವ
ಮೂಲಕ ದೇಶಕ್ಕೆ ಅವಮಾನ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೇಶದ್ರೋಹ ಪ್ರಕರಣ ದಾಖಲಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಈ ಹಕ್ಕನ್ನು ಕಲ್ಪಿಸಿರುವ ಸಂವಿಧಾನವನ್ನು ಸುಟ್ಟು ಹಾಕುವ ಮೂಲಕ ಜಾತಿ, ಧರ್ಮಾಂಧತೆಯ ವಿಕೃತಿ ತೋರಲಾಗಿದೆ. ಈ ಘಟನೆ ಹಿಂದೆ ಮನುವಾದಿ ಜಾತಿಯ ಮನಸ್ಸಿದೆ ಎಂದು ದೂರಿದರು.
 
ಅರಕ್ಷಣೆ ವಿರೋಧಿ ಸಂಘಟನೆ, ಭೂಮಿಹಾರ್‌ ಬ್ರಾಹ್ಮಣ ಏಕ್ತಾ ಮಂಚ್‌, ಆಜಾದ್‌ ಸೇನಾ ಸಂಘಟನೆಗಳು ಸಂವಿಧಾನದ ಪ್ರತಿಯನ್ನು ಸುಡುವ ಮೂಲಕ ದೇಶದ ಬಹುಸಂಖ್ಯಾತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿವೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಕೃತ ಮನಸುಗಳು ಸಂವಿಧಾನ ಬದ್ಧ ಮೀಸಲಾತಿ ವಿರೋಧಿಸುತ್ತಿವೆ. ಸಂವಿಧಾನ ಬಲಾವಣೆಯ ಮಾತು ಆಡಲಾಗುತ್ತಿದೆ. ಇದರ ಹಿಂದೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಬೆಂಬಲಿಸುವ ಸಂಘಟನೆಗಳು ಇವೆ ಎಂದರು.

ಸಂವಿಧಾನ ಪ್ರತಿಯನ್ನು ಸುಟ್ಟಿರುವ ದುಷ್ಕರ್ಮಿಗಳ ವಿರುದ್ಧ ದೇಶದ್ರೋಹ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ರಾಘವೇಂದ್ರ ಕುಷ್ಟಗಿ, ಲಕ್ಷ್ಮಣ ಮಂಡಲಗೇರಾ, ಮರಿಲಿಂಗಪ್ಪ ಕೋಳೂರು, ಖಾಜಾ ಅಸ್ಲಂ, ಹನುಮಂತಪ್ಪ ಕಾಕರಗಲ್‌, ಪರಪ್ಪ ನಾಗೋಲಿ, ಆಂಜನೇಯ, ಬಸವರಾಜ, ಶೇಖ ಅಹ್ಮದ್‌ ಇದ್ದರು. 

Advertisement

ಮಸ್ಕಿಯಲ್ಲಿ ಇಂದು ಪಂಜಿನ ಮೆರವಣಿಗೆ ಮಸ್ಕಿ: ಬಾಬಾಸಾಹೇಬ್‌ ಅಂಬೇಡ್ಕರ್‌ ರಚಿಸಿದ ಸಂವಿಧಾನ ಪ್ರತಿ ಸುಟ್ಟ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಆ.14ರಂದು ರಾತ್ರಿ 9 ಗಂಟೆಗೆ ಪಟ್ಟಣದಲ್ಲಿ ಪಂಜಿನ
ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತಿ ಸಿ. ದಾನಪ್ಪ ನಿಲೋಗಲ್‌ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯ ಜಂತರ್‌ ಮಂತರ್‌
ನಲ್ಲಿ ಡಾ| ಅಂಬೇಡ್ಕರ್‌ ಬರೆದ ಸಂವಿಧಾನ ಪ್ರತಿಯನ್ನು ಸುಡಲಾಗಿದೆ. ಈ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಲು ಆಗ್ರಹಿಸಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆ.14ರಂದು ರಾತ್ರಿ 9 ಗಂಟೆಗೆ ಗಾಂಧಿ ವೃತ್ತದಲ್ಲಿ ಪಂಜಿನ ಮೆರವಣಿಗೆ ಹೊರಟು ಪ್ರಮುಖ ರಸ್ತೆ, ವೃತ್ತಗಳ ಮಾರ್ಗವಾಗಿ ಹಳೆ ಬಸ್‌ ನಿಲ್ದಾಣದ
ಬಳಿ ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳ ಪ್ರತಿಕೃತಿ ದಹಿಸಲಾಗುವುದು ಎಂದು ಹೇಳಿದರು. 

ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳು, ಅಲ್ಪಸಂಖ್ಯಾತ ಸಂಘಟನೆ, ಬಿವಿಎಸ್‌ ಸಂಫಟನೆ ಸೇರಿ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next