ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಶ್ರುಶೂಷಾ ಮಹಾ ವಿದ್ಯಾಲಯದ 4ನೇ ವರ್ಷದ ವಿದ್ಯಾರ್ಥಿಗಳು ಶಾಸಕ ಎಚ್.ಡಿ.ರೇವಣ್ಣ ಅವರ ಮನೆ ಮುಂದೆ ಗುರುವಾರ ಧರಣಿ ನಡೆಸಿ ಪ್ರಾಂಶು ಪಾಲರು ಮತ್ತು ಉಪನ್ಯಾಸಕರ ವಿರುದ್ಧ ಆಕ್ರೀಶ ವ್ಯಕ್ತಪಡಿಸಿದರು.
ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ಪುನೀತ್ ಮತ್ತು ಪ್ರಿಯಾಂಕ ಮಾತನಾಡಿ, ತಾವು ಕಾಲೇಜಿನಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿಕೊಂಡಿದ್ದರೂ ಪ್ರಾಂಶುಪಾಲ ಚಂದ್ರಶೇಖರ್ ಮತ್ತು ಉಪನ್ಯಾಸಕಿಯೊಬ್ಬರು ವಿದ್ಯಾರ್ಥಿಗಳ ನಡುವೆ ತಾರತಮ್ಯ ನಡೆಸಿ ನಮಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಫೇಲ್ ಮಾಡುವುದಾಗಿ ಬೆದರಿಕೆ- ಆರೋಪ: ವಿದ್ಯಾರ್ಥಿಗಳಾದ ತಮ್ಮನ್ನು ತಮ್ಮ ಸ್ವಂತ ಕೆಲಸಗಳಿಗೆ ನಿಯೋಜಿಸಿ ಮನೆ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ಮನೆಯಲ್ಲಿ ಶೌಚಾಲಯವನ್ನು ನಮ್ಮಿಂದಲೇ ಶುಚಿಗೊಳಿಸುವಂತೆ ತಮಗೆ ಬೆದರಿಕೆ ಹಾಕಿ ತಾವು ಹೇಳಿದ ಕೆಲಸವನ್ನು ಮಾಡದೇ ಹೋದರೆ ನಿಮ್ಮನ್ನು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ವಿದ್ಯಾರ್ಥಿಗಳಿಂದ ಹಣ ವಸೂಲಿ: ಕಾಲೇಜಿನ ಸಣ್ಣ ಪುಟ್ಟ ಖರ್ಚಿಗೆ ವಿದ್ಯಾರ್ಥಿಗಳಿಂದಲೇ ಬಲವಂತದಿಂದ ವಸೂಲಿ ಮಾಡುತ್ತಿದ್ದಾರೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕಿ ಈ ಕಾಲೇಜು ಆರಂಭವಾದ ವರ್ಷದಿಂದ ಇಲ್ಲಿಯೇ ಠಿಕಾಣಿ ಹಾಕಿರುವುದರಿಂದ ನಮ್ಮ ಮೇಲೆ ದಬ್ಟಾಳಿಕೆ ನಡೆಸಲು ಕಾರಣವಾಗಿದೆ ಎಂದು ದೂರಿದರು. ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಟೆಸ್ಟ್ ಮತ್ತು ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ನೀಡಿ ಬೇರೆ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಹಿಂದೆ ಪ್ರಾಂಶುಪಾಲೆ ಸರೋಜಿನಿದೇವಿ ಅವರು ಇದ್ದಾಗ ಕಾಲೇಜು ಅತ್ಯಂತ ಸುಲಲಿತವಾಗಿ ನಡೆಯುತ್ತಿತ್ತು. ಆದರೆ ಅವರು ನಿವೃತ್ತಿ ಹೊಂದಿದ ನಂತರ ಈ ಕಾಲೇಜಿನಲ್ಲಿ ಹೇಳುವವರು ಮತ್ತು ಕೇಳುವವರು ಇಲ್ಲದಂತಾಗಿದೆ ಅಸಮಾಧಾನ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರ ಮುಂದೆ ಹೇಳಿದರೆ ನೀವು ಮೊದಲು ಉಪನ್ಯಾಸಕಿ ಹೇಳಿದಂತೆ ಕೇಳಿ ಎಂದು ಸಾಗ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚಿನ ದಿನಗಳಲ್ಲಿ ಕಿರುಕುಳ ಹೆಚ್ಚಾಗುತ್ತಿದ್ದು,ಪ್ರಾಂಶುಪಾಲರು ಮತ್ತು ಉಪನ್ಯಾಸಕಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸುಮಾರು ಇಪ್ಪತ್ತಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.