ಜೇವರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ತಲೆ ಮೇಲೆ ಸೈಜುಗಲ್ಲು ಹೊತ್ತುಕೊಂಡು ನೂರಾರು ಜನ ರೈತರು, ಮಹಿಳೆಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆಯ ತಹಶೀಲ್ ಕಚೇರಿಯಿಂದ ತಹಶೀಲ್ದಾರ್ ಕಚೇರಿ ಅವರಿಗೆ ನೂರಾರು ಜನ ರೈತರು, ಮಹಿಳೆಯರು, ಕೂಲಿಕಾರ್ಮಿಕರು ತಲೆಯ ಮೇಲೆ ಸೈಜುಗಲ್ಲು ಹೊತ್ತುಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು, 60 ವಯಸ್ಸಿನ ವೃದ್ಧಾಪಿ ರೈತರು ಮತ್ತು ಕಾರ್ಮಿಕರಿಗೆ ಪ್ರತಿ ತಿಂಗಳು 7500 ರೂ. ಮಾಶಾಸನ ಮಂಜೂರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ರೈತರ ಹೋರಾಟಕ್ಕೆ ಸ್ಪಂದಿಸದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮನವಿ ಸಲ್ಲಿಸಿದ ಎಲ್ಲ ಬೇಡಿಕೆಗಳು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ವೆಂಕೋಬರಾವ್ ವಾಗಣಗೇರಿ, ಮಲಕಪ್ಪ ಹರನೂರ, ಶಂಕರಲಿಂಗ ರೇವನೂರ, ರೇವು ಜಾಧವ ರೇವನೂರ, ಶ್ರೀನಾಥ ಕೋಳಕೂರ, ರಾಜು ಸಾಥಖೇಡ, ಈರಣ್ಣ ರಾಠೊಡ, ನಾಗಮ್ಮ ಹನ್ನೂರ, ಮಲ್ಕಮ್ಮ ಬಳಬಟ್ಟಿ, ನಾಗಮ್ಮ ಬಿರಾದಾರ, ಸಿದ್ದು ಮುತ್ತಕೋಡ, ಮಲ್ಲಿಕಾರ್ಜುನ ವರ್ಚನಳ್ಳಿ ಸೇರಿದಂತೆ ನೂರಾರು ಜನ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.