ತೆಲಂಗಾಣ: ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಟಿ.ರಾಜಾ ಸಿಂಗ್ ಬಂಧನವನ್ನು ವಿರೋಧಿಸಿ ಅವರ ಬೆಂಬಲಿಗರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋಶಾಮಹಲ್ ಪ್ರದೇಶದಲ್ಲಿ ಹೈದರಾಬಾದ್ ಪೊಲೀಸರು ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕರ್ನಾಟಕ ಸಂಗೀತ ಗಾಯಕ ಪದ್ಮಭೂಷಣ ಟಿ.ವಿ.ಶಂಕರನಾರಾಯಣನ್ ವಿಧಿವಶ
ಶುಕ್ರವಾರ ಶ್ರೀರಾಮ್ ಯುವಸೇನಾ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ, ಶನಿವಾರ ಗೋಶಾಮಹಲ್ ಬಂದ್ ಗೆ ಕರೆ ನೀಡಿದ್ದರು. ಈ ಪ್ರಕರಣದಲ್ಲಿ ನಿಜವಾದ ಆರೋಪಿ ಸಚಿವ ಕೆಟಿಆರ್ ಹೊರತುಪಡಿಸಿ ಬೇರೆ ಯಾರೂ ಅಲ್ಲ ಎಂದು ಆರೋಪಿಸಿದ್ದರು.
ಹೈದರಾಬಾದ್ ನಲ್ಲಿ ಮುನಾವರ್ ಫಾರೂಖಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ಶ್ರೀರಾಮ್ ಯುವಸೇನಾ, ಭಾರೀ ಭದ್ರತೆಯೊಂದಿಗೆ ಹೈದರಾಬಾದ್ ನಲ್ಲಿ ಮುನಾವರ್ ಗೆ ಸರ್ಕಾರ ಹೇಗೆ ಅನುಮತಿ ನೀಡಿತು? ಮುನಾವರ್ ಹಿಂದೂ ದೇವರನ್ನು ಅವಹೇಳನ ಮಾಡಿರುವುದಾಗಿ ದೂರಿತ್ತು.
ತೆಲಂಗಾಣ ರಾಷ್ಟ್ರೀಯ ಸಮಿತಿ ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿರುವ ಯುವಸೇನಾ, ತೆಲಂಗಾಣ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯಗಳಿರುವುದೇಕೆ? ಒವೈಸಿಯಂತಹ ದ್ವೇಷ ಭಾಷಣ ಮಾಡುವವರನ್ನು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಯಾಕೆ ಬಂಧಿಸಿಲ್ಲ. ಕೇವಲ ಶಾಸಕ ರಾಜಾ ಸಿಂಗ್ ಅವರನ್ನು ಮಾತ್ರ ಈ ಕಾಯ್ದೆಯಡಿ ಬಂಧಿಸಿದ್ದೇಕೆ ಎಂದು ಪ್ರಶ್ನಿಸಿದೆ.