Advertisement

ಲೈನ್‌ಮನ್‌ ಶವವಿಟ್ಟು ಜೆಸ್ಕಾಂ ಎದುರು ಪ್ರತಿಭಟನೆ

12:11 PM Apr 26, 2022 | Team Udayavani |

ಚಿಂಚೋಳಿ: ತಾಲೂಕಿನ ಐನೋಳಿ ಗ್ರಾಮದಲ್ಲಿ ಕಳೆದ ಶನಿವಾರ (ಏ. 16) ವಿದ್ಯುತ್‌ ತಂತಿ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶವಾಗಿ ಗಂಭೀರವಾಗಿ ಗಾಯಗೊಂಡಿದ್ದ ಲೈನ್‌ ಮನ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರಿಂದ ಜೆಸ್ಕಾಂ ಎದುರು ಗ್ರಾಮಸ್ಥರು ಆತನ ಶವವಿಟ್ಟು ಪ್ರತಿಭಟನೆ ಮಾಡಿದರು.

Advertisement

ಮಹಾರಾಷ್ಟ್ರದ ಮೀರಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐನೋಳಿ ಗ್ರಾಮದ ಹಾರುನಖಾನ್‌ ಫತ್ತೇಖಾನ್‌ (52) ಮೃತಪಟ್ಟ ವ್ಯಕ್ತಿ.

ರವಿವಾರ ಈ ಸುದ್ದಿ ತಿಳಿದ ಗ್ರಾಮಸ್ಥರು ಸೋಮವಾರ ಮಧ್ಯರಾತ್ರಿಯೇ ಜೆಸ್ಕಾಂ ಎದುರು ಜಮಾಯಿಸಿ, ಶವವಿಟ್ಟು ಪ್ರತಿಭಟನೆ ನಡೆಸಿ, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ವಕೀಲ ವಿಶ್ವನಾಥ ಬೆನಕಿನ ಮಾತನಾಡಿ, ಮೃತಪಟ್ಟ ಲೈನಮನ್‌ ಕಳೆದ 30 ವರ್ಷಗಳಿಂದ ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ವಿದ್ಯುತ ತಂತಿ, ಇನ್ನಿತರ ದುರಸ್ತಿಕಾರ್ಯ ಮಾಡಿ, ತನ್ನ ಕುಟುಂಬಕ್ಕೆ ಆಸರೆಯಾಗಿದ್ದ. ಒಟ್ಟು ಏಳು ಮಕ್ಕಳನ್ನು ಹೊಂದಿರುವ ಈತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಮಾತನಾಡಿ, ಲೈನಮನ್‌ ಹಾರುನಖಾನ್‌ ಮೃತಪಟ್ಟಿದ್ದು ತಿಳಿದ ತಕ್ಷಣವೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕಿತ್ತು. ಜೆಸ್ಕಾಂ ಎದುರು ಶವವಿಟ್ಟು ಪ್ರತಿಭಟನೆ ಮಾಡುವ ಅಗತ್ಯವಿರಲಿಲ್ಲ. ಮೃತನ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಬೇಕೆಂದು ಇದಕ್ಕೂ ಮುನ್ನ ನಡೆಸಿದ ಪ್ರತಿಭಟನೆಯಲ್ಲಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.

Advertisement

ಬಿಜೆಪಿ ಮುಖಂಡ ಕೆ.ಎಂ.ಬಾರಿ ಮಾತನಾಡಿ, ಮೃತನ ಕುಟುಂಬಕ್ಕೆ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

5ಲಕ್ಷ ರೂ. ಪರಿಹಾರ-ಒಬ್ಬನಿಗೆ ಖಾಸಗಿ ನೌಕರಿ

ಚಂದಾಪುರ ಜೆಸ್ಕಾಂ ಇಲಾಖೆ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್‌ ಅಂಜುಮ ತಬಸುಮ, ಸೇಡಂ ವಿಭಾಗದ ಇಇ ಖಂಡೆಪ್ಪ, ಎಇಇ ಶಿವರಾಮ ರಾಠೊಡ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜೆಸ್ಕಾಂ ಅಧಿಕಾರಿಗಳು ಮೃತನ ಕುಟುಂಬಕ್ಕೆ ಪರಿಹಾರವಾಗಿ 5ಲಕ್ಷ ರೂ. ನೀಡಲಾಗುವುದು. ಆತನ ಮಗನಿಗೆ ಖಾಸಗಿ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಐನೋಳಿ ಗ್ರಾಪಂ ಅಧ್ಯಕ್ಷ ಅಶೋಕ ಭಜಂತ್ರಿ, ಅಲ್ಲಾವುದ್ದೀನ ಅನಸಾರಿ, ಮಶಾಕ, ಹಣಮಂತ ಹಿರೇಮನಿ, ಗೌಸೋದ್ದೀನ್‌ ಹೂಡಾ, ಆಶೀಪ್‌ ಹೂಡಾ, ಭೀಮು ಬಡಿಗೇರ, ಮಶಾಕ ಲಕಪತಿ, ಅಸ್ಲಾಮ ಗಡ್ಡಿಮನಿ, ಚಂದ್ರಕಾಂತ ತಳವಾರ, ಹಣಮಂತ ಅಕಬರ ಹೂಡಾ, ನಿಯಾಜ ಅಲಿ ಇನ್ನಿತರರಿದ್ದರು.

ಮಧ್ಯಾಹ್ನ 2ಗಂಟೆಗೆ ಐನೋಳಿ ಗ್ರಾಮದಲ್ಲಿ ಮೃತನ ಅಂತ್ಯಕ್ರಿಯೆ ನಡೆಯಿತು. ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next