ಕೋಟ: ಬೀಜಾಡಿ ಸಂಪರ್ಕಿಸುವ ಮಣೂರು-ಪಡುಕರೆಯ ಕಡಲ ಕಿನಾರೆಯ ಮೀನುಗಾರಿಕೆ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ರಿಕ್ಷಾ ಚಾಲಕರ ನೇತೃತ್ವದಲ್ಲಿ ಮಣೂರು ಸಂಯುಕ್ತ ಪ್ರೌಢಶಾಲೆಯ ಬಳಿ ಬುಧವಾರ ಪ್ರತಿಭಟನೆ ನಡೆಯಿತು.
ಈ ರಸ್ತೆ ನಾಲ್ಕೈದು ವರ್ಷದಿಂದ ಸಂಪೂರ್ಣ ಹಾಳಾಗಿದ್ದು ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ರಿಕ್ಷಾ ಹಾಗೂ ಶಾಲಾ ವಾಹನ ಮುಂತಾದವುಗಳು ಸಂಚರಿಸಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು ಈ ಬಾರಿ ಮಳೆಗಾಲಕ್ಕೆ ಮೊದಲು ದುರಸ್ತಿಗೊಳಿಸಬೇಕು, ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳೀಯಾಡಳಿತಕ್ಕೆ ಮನವಿ
ಈ ಸಂದರ್ಭ ಸ್ಥಳಕ್ಕಾಗಮಿಸಿದ ವಾರ್ಡ್ ಸದಸ್ಯ ಭುಜಂಗ ಗುರಿಕಾರ, ಗ್ರಾ.ಪಂ. ಕಾರ್ಯದರ್ಶಿ ಮಂಜು ಅವರು ಸ್ಥಳೀಯರಿಂದ ಮನವಿ ಸ್ವೀಕರಿಸಿದರು. ಸಮಸ್ಯೆಯನ್ನು ಈಗಾಗಲೇ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಗಮನಕ್ಕೆ ತರಲಾಗಿದೆ ಹಾಗೂ ಈ ಹಿಂದೆ ಅಂದಾಜುಪಟ್ಟಿ ತಯಾರಿಸಿದ ರೀತಿಯಲ್ಲೇ 200 ಮೀ. ರಸ್ತೆ ದುರಸ್ತಿ ಶೀಘ್ರ ನಡೆಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಭುಜಂಗ ಗುರಿಕಾರ ತಿಳಿಸಿದರು.
ಕೋಟ ಠಾಣೆ ಪೊಲೀಸ್ ಉಪನಿರೀಕ್ಷಕ ರಫೀಕ್ ಎಂ. ಸಿಬಂದಿಗಳೊಂದಿಗೆ ಉಪಸ್ಥಿತರಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿದರು. ರಿಕ್ಷಾ ಯೂನಿಯನ್ ಅಧ್ಯಕ್ಷ ನಾರಾಯಣ ಮೆಂಡನ್, ರಿಕ್ಷಾ ಚಾಲಕರಾದ ರಾಜೇಂದ್ರ ಕಾಂಚನ್, ಸತೀಶ್ ಮೆಂಡನ್, ಹೇಮಂತ್ ಕುಂದರ್, ಸುರೇಶ್, ಯೋಗೀಂದ್ರ ಪುತ್ರನ್, ಉದಯ ತಿಂಗಳಾಯ, ಕೆ.ಕೆ.ಪ್ರಶಾಂತ್, ರಾಜೇಂದ್ರ ಮರಕಾಲ ಉಪಸ್ಥಿತರಿದ್ದರು.