Advertisement

10ನೇ ದಿನಕ್ಕೆ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ 

04:40 PM Jun 01, 2018 | |

ನಗರ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ಪುತ್ತೂರು ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ಗುರುವಾರ 10ನೇ ದಿನಕ್ಕೆ ಕಾಲಿಟ್ಟಿತು.

Advertisement

ಧರಣಿ ನಡೆಸಿದವರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸುನೀಲ್‌ ದೇವಾಡಿಗ, ದೇಶದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಇಲಾಖೆಯ ಉನ್ನತ ಅಧಿಕಾರಿಗಳು ಪ್ರತಿಭಟನೆ ನಿಲ್ಲಿಸಿ, ಒಂದು ತಿಂಗಳೊಳಗೆ ವೇತನ ಆಯೋಗ ಜಾರಿಗೊಳಿಸಲು ಒತ್ತಡ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಕೇಂದ್ರ ಸರಕಾರ ಬೇಡಿಕೆಗಳ ಈಡೇರಿಕೆ ಕುರಿತು ಲಿಖೀತ ಭರವಸೆ ನೀಡದ ಹೊರತು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದರು.

ಸಾವಿಗೂ ಎಚ್ಚೆತ್ತಿಲ್ಲ
ಪ್ರತಿಭಟನೆ ನಿರತರಾಗಿದ್ದ ನಾಲ್ಕು ಮಂದಿ ಗ್ರಾಮೀಣ ಅಂಚೆ ನೌಕರರು ಮೃತಪಟ್ಟಿದ್ದಾರೆ. ಆದರೂ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ನಮ್ಮ ಜೀವನದ ಪ್ರಶ್ನೆಯಾಗಿರುವುದರಿಂದ ನ್ಯಾಯಕ್ಕಾಗಿ ಸಂವಿಧಾನಬದ್ಧ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಕನಿಷ್ಠ ವೇತನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸರಕಾರ ಹಠಮಾರಿ ಧೋರಣೆಯನ್ನು ಕೂಡಲೇ ಕೈಬಿಟ್ಟು ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಜನತೆಗೆ ಕೃತಜ್ಞತೆ
ದೇಶದಲ್ಲಿ ಅಂಚೆ ಇಲಾಖೆ 12 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ ಎನ್ನುತ್ತಾರೆ. ಆದರೆ ಇದಕ್ಕೆಲ್ಲ ಕಾರಣ ಇಲಾಖೆಯ ಅಧಿಕಾರಿಗಳು ಎಂದು ಆರೋಪಿಸಿದ ಅವರು, ಗ್ರಾಮೀಣ ಅಂಚೆ ನೌಕರರ ಸಂಕಷ್ಟ ಕಂಡು ಜನತೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಗ್ರಾಮೀಣ ಅಂಚೆ ನೌಕರರು ಧರಣಿ ಪ್ರತಿಭಟನೆ ಆರಂಭಿಸಿದ ಬಳಿಕ ಕಾರ್ಕಳ ಉಪ ವಿಭಾಗವೊಂದರಲ್ಲೇ 10 ಸಾವಿರ ಪತ್ರಗಳು ಬಾಕಿಯಾಗಿವೆ. ಹಾಗಾದರೆ 5 ಉಪ ವಿಭಾಗಗಳನ್ನು ಹೊಂದಿರುವ ಪುತ್ತೂರು ವಿಭಾಗದಲ್ಲಿ ಎಷ್ಟು ಪತ್ರಗಳು ಬಾಕಿಯಾಗಿರಬಹುದು? ಎಂದು ಪ್ರಶ್ನಿಸಿದ ಅವರು ಈ ಸಮಸ್ಯೆಗಳನ್ನು ಮರೆಮಾಚದೆ ಅಧಿಕಾರಿಗಳು ಸರಕಾರಕ್ಕೆ ಮುಟ್ಟಿಸಬೇಕು ಎಂದು ಆಗ್ರಹಿಸಿದರು.

Advertisement

ಶ್ರದ್ಧಾಂಜಲಿ ಅರ್ಪಣೆ
ದೇಶದ ಪ್ರತಿಭಟನ ನಿರತ ಗ್ರಾಮೀಣ ಅಂಚೆ ನೌಕರರಲ್ಲಿ 4 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಮೌನಪ್ರಾರ್ಥನೆಯ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಉಪಾಧ್ಯಕ್ಷ ಬಿ. ಪ್ರಮೋದ್‌ ಕುಮಾರ್‌, ವಿಭಾಗೀಯ ಅಧ್ಯಕ್ಷ ವಿಠ್ಠಲ  ಪೂಜಾರಿ, ಗೌರವಾಧ್ಯಕ್ಷ ಜಗತ್ಪಾಲ ಹೆಗ್ಡೆ ಮೊದಲಾದವರು ಪಾಲ್ಗೊಂಡರು.

ಇಂದು ದಿಲ್ಲಿ ಚಲೋ
ಜೂ 1ರಂದು ಗ್ರಾಮೀಣ ಅಂಚೆ ನೌಕರರು ದೆಹಲಿ ಚಲೋ ಉಗ್ರ ಹೋರಾಟವನ್ನು ನಡೆಸಲು ತೀರ್ಮಾನಿಸಿದ್ದಾರೆ. ದೇಶದ 50 ರಿಂದ 1 ಲಕ್ಷ ಮಂದಿ ನೌಕರರು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕರ್ನಾಟಕ ರಾಜ್ಯದಿಂದ ಸುಮಾರು 20 ಸಾವಿರ ಮಂದಿ ನೌಕರರು ತೆರಳಲಿದ್ದಾರೆ. ಆಯಾ ತಾಲೂಕು ವ್ಯಾಪ್ತಿಗಳಲ್ಲಿ ಉದ್ದೇಶ ಈಡೇರುವ ವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಸುನಿಲ್‌ ದೇವಾಡಿಗ ಹೇಳಿದರು.

 1,467 ಬ್ಯಾಗ್‌ಬಾಕಿ
ನಾಳೆಯಿಂದ ಇಲಾಖಾ ನೌಕರರೂ ಗ್ರಾಮೀಣ ಅಂಚೆ ನೌಕರರ ಧರಣಿಯ ಜತೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದು, ಅವರು ಭಾಗವಹಿಸುವ ನಿರೀಕ್ಷೆ ಇದೆ. ಪುತ್ತೂರು ವಿಭಾಗದಲ್ಲಿ ಬಟವಾಡೆಯಾಗದ 1,467 ಬ್ಯಾಗ್‌ಗಳು ಬಾಕಿಯಾಗಿವೆ. ವಿಭಾಗದ 215 ಬ್ರಾಂಚ್‌ ಗಳಲ್ಲಿ ಶೇ.75 ಮಂದಿ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
– ಸುನೀಲ್‌ ದೇವಾಡಿಗ
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ
ವಿಭಾಗೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next