Advertisement

ಜ್ಞಾನಭಾರತಿ ಶಾಲೆಯಲ್ಲಿ ದಿಢೀರ್‌ ಪ್ರತಿಭಟನೆ

02:38 PM Oct 28, 2021 | Shwetha M |

ಮುದ್ದೇಬಿಹಾಳ: ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಜ್ಞಾನಭಾರತಿ ಶಾಲೆ ಶೌಚಾಲಯದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸುವಂತೆ ಕೋರಲು ಹೋದ ಅಲ್ಲಿನ ನಿವಾಸಿಗಳೊಂದಿಗೆ ಶಾಲೆ ಆಡಳಿತ ಮಂಡಳಿ ಸಲಹಾ ಸಮಿತಿ ಸದಸ್ಯರೊಬ್ಬರು ಅತಿರೇಕದಿಂದ ವರ್ತಿಸಿದ್ದನ್ನು ಖಂಡಿಸಿ ಬಡಾವಣೆ ನಿವಾಸಿಗಳು ವಾರ್ಡ್‌ ಪ್ರತಿನಿಧಿಸುವ ಪುರಸಭೆ ಸದಸ್ಯೆ ಸೋನುಬಾಯಿ ನಾಯಕ ನೇತೃತ್ವದಲ್ಲಿ ಬುಧವಾರ ಶಾಲೆಯಲ್ಲೇ ದಿಢಿರ್‌ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು.

Advertisement

ಶಾಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಇದರ ಮೇಲ್ಛಾವಣಿಯ ತಗಡು ಕಿತ್ತು ಹೋಗಿದೆ. ಪಕ್ಕದಲ್ಲಿರುವ ಮನೆಗಳ ಶೌಚಾಲಯಕ್ಕಿಂತ ಹೆಚ್ಚು ಎತ್ತರದಲ್ಲಿರುವ ಕಾರಣ ಒಳಗೆ ನಡೆಯುವುದನ್ನು ಕಿಡಿಗೇಡಿಗಳು ನೋಡಲು ಅವಕಾಶ ಇದೆ. ಇದಲ್ಲದೆ ಶೌಚಾಲಯದಿಂದ ಹೊರ ಸೂಸುವ ವಾಸನೆ ಅಕ್ಕಪಕ್ಕದ ನಿವಾಸಿಗಳಿಗೆ ನಿತ್ಯ ಕಿರಿ ಕಿರಿ ತಂದೊಡ್ಡುತ್ತಿದೆ. ಇವೆರಡೂ ಸಮಸ್ಯೆ ಬಗೆಹರಿಸಿ ಎಂದು ಕೆಲ ಬಾರಿ ತಿಳಿ ಹೇಳಿದರೂ ಆಡಳಿತ ಮಂಡಳಿಯವರು ಕ್ರಮ ಕೈಗೊಂಡಿಲ್ಲ ಎಂದು ಸೋನುಬಾಯಿ ಆಪಾದಿಸಿದರು.

ಸೋನುಬಾಯಿ ಮಾತಿಗೆ ಧ್ವನಿಗೂಡಿಸಿದ ಬಡಾವಣೆ ಕೆಲ ನಿವಾಸಿಗಳು, ಶೌಚಾಲಯದ ಕಟು ವಾಸನೆ ಸಹಿಸಲಾಗುತ್ತಿಲ್ಲ. ಸೊಳ್ಳೆಗಳು ಹೆಚ್ಚಾಗಿ ಸಂಜೆ ಮನೆಯಲ್ಲಿ ಇರಲು ಆಗುತ್ತಿಲ್ಲ. ವಿದ್ಯಾರ್ಥಿನಿಯರ ಶೌಚಾಲಯದ ತಗಡಿನ ಶೀಟ್‌ ಕಿತ್ತು ಹೋಗಿದ್ದರಿಂದ ಒಳಗಿನ ಚಿತ್ರಣ ಕಂಡು ಬಂದು ಅಸಹ್ಯ ಹುಟ್ಟಿಸುತ್ತದೆ. ಭವಿಷ್ಯದಲ್ಲಿ ಕಿಡಿಗೇಡಿಗಳಿಂದ ಏನಾದರೂ ಸಮಸ್ಯೆ ಆದಲ್ಲಿ ಯಾರು ಹೊಣೆ. ಇವುಗಳನ್ನು ಸರಿಪಡಿಸಿ ಎಂದು ಹೇಳಲು ಹೋದರೆ ಆ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಡಾವಣೆಯ ಕೆಲ ನಿವಾಸಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡರು ಎಂದು ದೂರಿದರು.

ಒಂದು ಹಂತದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳೊಂದಿಗೆ ವಾಗ್ವಾದವೂ ನಡೆಯಿತು. ಅನುಚಿತವಾಗಿ ನಡೆದುಕೊಂಡಿರುವ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಕ್ಷಮೆ ಕೋರಿಸುವಂತೆ ಜನರು ಪಟ್ಟು ಹಿಡಿದರು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಆಡಳಿತ ಮಂಡಳಿ ಪದಾಧಿಕಾರಿಗಳಾದ ಬಿ.ಪಿ.ಕುಲಕರ್ಣಿ, ಮಾಣಿಕಚಂದ ದಂಡಾವತಿ, ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ ಅವರು ಸಾರ್ವಜನಿಕರ ನ್ಯಾಯಯುತ ಬೇಡಿಕೆ ಮನ್ನಿಸಿ ಕೂಡಲೆ ಶೌಚಾಲಯದ ಸಮಸ್ಯೆ ಬಗೆಹರಿಸಲಾಗುತ್ತದೆ ಮತ್ತು ಶೌಚಾಲಯದ ಮೇಲೆ ತಗಡಿನ ಶೀಟ್‌ ಹಾಕಿ ಒಳಗಿನಿಂದ ಕಾಣದಂತೆ ಮಾಡಲಾಗುತ್ತದೆ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ದೇಶದ ಅಭಿವೃದ್ದಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಖಂಡ್ರೆ

Advertisement

ಈ ವೇಳೆ ಶಾಲೆಗೆ ಆಗಮಿಸಿದ ಸದಸ್ಯ ಡಾ| ಪರಶುರಾಮ ಪವಾರ ಅವರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋಗುವುದನ್ನು ಇಣುಕಿ ಹಾಕಿ ನೋಡುವವರ ಮನಸ್ಥಿತಿ ಟೀಕಿಸುವ ಭರದಲ್ಲಿ ಕೆಲ ಮಾತುಗಳು ಸಹನೆ ಮೀರಿ ಬಂದಿರಬಹುದು. ಆ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಉದ್ವಿಗ್ನಗೊಳ್ಳಬಹುದಾಗಿದ್ದ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು.

ಮೇಲಿಂದ ಮೇಲೆ ಶೌಚಾಲಯದಿಂದ ಆಗುವ ಸಮಸ್ಯೆ ತಪ್ಪಿಸಲು ಅದನ್ನು ಶಾಶ್ವತವಾಗಿ ಬೇರೆಡೆ ಸ್ಥಳಾಂತರಿಸುವ ಬೇಡಿಕೆಗೆ ಒಪ್ಪಿದ ಆಡಳಿತ ಮಂಡಳಿಯವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ಶಾಸ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಶೌಚಾಲಯದಿಂದ ಆಗುತ್ತಿರುವ ತೊಂದರೆ ನಿವಾರಿಸುವಂತೆ ಕೋರಿ ಬಿಇಒ, ತಹಶೀಲ್ದಾರ್‌, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾಗಿ ವಾರ್ಡ್‌ ನಿವಾಸಿಗಳು ತಿಳಿಸಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪುರ, ಪುರಸಭೆ ಸದಸ್ಯರಾದ ಮಹೆಬೂಬ ಗೊಳಸಂಗಿ ಹಾಗೂ ರಿಯಾಜ್‌ಅಹ್ಮದ್‌ ಢವಳಗಿ, ರುದ್ರಗೌಡ ಅಂಗಡಗೇರಿ, ಡಾ| ವಿಜಯಕುಮಾರ ನಾಯಕ, ಮಾಜಿ ಸೈನಿಕ ನಾನಪ್ಪ ನಾಯಕ, ಅನಿಲ ನಾಯಕ, ಸಮೀರ ದ್ರಾಕ್ಷಿ, ಗೌರವ್ವ ಕರಡಿ, ಶರಣಮ್ಮ ಹಿರೇಮಠ, ಸಿದ್ದಮ್ಮ ಹಿರೇಅಂಬಿಗೇರ, ಎನ್‌ .ಪಿ.ಹಡಪದ, ಖಾಜಾಬಿ ಕೂಚಬಾಳ, ಮಹಾದೇವಿ ಅಂಬಿಗೇರ, ಬಿ.ಪಿ.ಪತ್ತಾರ, ಸಿ.ಎನ್‌.ಹಡಪದ, ಎ.ಎಸ್‌.ನಾಯಕ, ಬಡಾವಣೆಯ ನಿವಾಸಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next