ಮಂಡ್ಯ: ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ(ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಆರ್ಥಿಕ ಸಹಭಾಗಿತ್ವದ 16 ದೇಶಗಳ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಲು ಮುಂದಾಗಿದೆ. ಈ ಒಪ್ಪಂದ ಜಾರಿಯಾದರೆ ರೈತರ ಜೀವನೋಪಾಯವಾದ ಹೈನುಗಾರಿಕೆ, ತೋಟಗಾರಿಕೆ ಮತ್ತು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾರುಕಟ್ಟೆ ವಿಸ್ತರಿಸಲಿವೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಗ್ನೇಯರಾಷ್ಟ್ರಗಳ ಒಕ್ಕೂಟದ ಸದಸ್ಯರಾಷ್ಟ್ರಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳುವುದರಿಂದ ಆ ರಾಷ್ಟ್ರಗಳು ಲೀಟರ್ ಹಾಲಿಗೆ 12 ರೂ. ಹಾಗೂ ಉತ್ಪನ್ನಗಳಿಗೆ ಕಡಿಮೆ ಬೆಲೆಗೆ ದೇಶದ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ. ನಂತರ ಬೆಲೆ ಹೆಚ್ಚಿಸಲಿವೆ. ಇದರಿಂದ ದೇಶದ ರೈತರ ಹೈನುಗಾರಿಕೆ ಸಂಪೂರ್ಣ ನಾಶವಾಗಲಿದೆ. ಲಕ್ಷಾಂತರ ಮಂದಿ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ ಎಂದು ಎಚ್ಚರಿಸಿದರು.
ಆಮದು ಒಪ್ಪಂದ ಬೇಡ: ವಿದೇಶದ ಸಂಸ್ಥೆಗಳು ನಮ್ಮ ದೇಶದ ಮಾರುಕಟ್ಟೆಗೆ ನೇರವಾಗಿ ಪ್ರವೇಶ ಮಾಡುವುದರಿಂದ ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲದಂತಾಗುತ್ತದೆ. ತೋಟಗಾರಿಕೆ, ಕೃಷಿ ಕ್ಷೇತ್ರಗಳ ಮೇಲೆ ದೊಡ್ಡ ಪರಿಣಾಮ ಬೀರಿ ಬೀಜ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಹಿಂದಿನ ಗ್ಯಾಟ್ ಒಪ್ಪಂದ, ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದಗಳಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿದು ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆರ್‌ಸಿಇಪಿ ಒಪ್ಪಂದ ಇದಕ್ಕಿಂತಲೂ ದೊಡ್ಡ ಮಾರಕವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಒಪ್ಪಂದದಿಂದ ಹೊರಬರಬೇಕು ಎಂದು ಆಗ್ರಹಿಸಿದರು.
ಕಬ್ಬು ಕಟಾವು ಮಾಡಿ: ಜಿಲ್ಲೆಯಲ್ಲಿ ರೈತ ಬೆಳೆದಿರುವ ಕಬ್ಬು ಬೆಳೆಗೆ 15 ತಿಂಗಳು ತುಂಬಿದ್ದು, ಇಳುವರಿ ನಷ್ಟವಾಗುವ ಭೀತಿ ಎದುರಾಗಿದೆ. ಮೈಷುಗರ್ ಮತ್ತು ಪಿಎಸ್ ಎಸ್‌ಕೆ ಕಾರ್ಖಾನೆಗಳ ವ್ಯಾಪ್ತಿ ಕಬ್ಬನ್ನು ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಖಾನೆಗಳಿಗೆ ಸಾಗಿಸಲು ಕೂಡಲೇ ಕ್ರಮ ವಹಿಸಬೇಕು. ಸಾಗಣೆ ವೆಚ್ಚ ಸರ್ಕಾರವೇ ಭರಿಸಬೇಕು ಎಂದು ರೈತ ಮುಖಂಡ ಮಂಜೇಶ್‌ಗೌಡ ಒತ್ತಾಯಿಸಿದರು. ಗೋಷ್ಠಿಯಲ್ಲಿ ಮುಖಂಡರಾದ ತೇಜಸ್, ಸೊ.ಶಿ.ಪ್ರಕಾಶ್, ಜಯಕುಮಾರ್ ಇದ್ದರು.