ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಂಗಳೂರು, ಕಲಬುರಗಿ, ಬಳ್ಳಾರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತಾರಕಕ್ಕೇರಿದೆ. ಮತ್ತೊಂದೆಡೆ ನಿಷೇಧಾಜ್ಷೆ ನಡುವೆಯೂ ಸಿಎಎ ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೇ ರೀತಿಯಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಜಾರಿ ವಿರೋಧಿಸಿ ಎಡಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಹಲವೆಡೆ ಪ್ರತಿಭಟನೆ ನಡೆಸುತ್ತಿವೆ. ಆದರೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡಾ ಪ್ರತಿಭಟನಾಕಾರರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಇಳಿದಿದ್ದಾರೆ ಎಂದು ವರದಿ ತಿಳಿಸಿದೆ.
ಮನೆಯಲ್ಲಿಯೇ ವಾಟಾಳ್ ನಾಗರಾಜ್ ಬಂಧನ:
ನಿಷೇಧಾಜ್ಞೆ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಭಾಗವಹಿಸಲು ಆಗಮಿಸಲಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸದಾಶಿವನಗರದಲ್ಲಿರುವ ನಿವಾಸದಲ್ಲಿಯೇ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.