ರಾಯಬಾಗ : ಕುಡಿಯುವ ನೀರಿಗಾಗಿ ಮಹಿಳೆಯರು ಹಾಗೂ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ಮಾಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ತಾಲೂಕಿನ ಹುಬ್ಬರವಾಡಿ ಗ್ರಾಮದಲ್ಲಿ ನಡೆದಿದೆ.
ಹುಬ್ಬರವಾಡಿ ಗ್ರಾಮಕ್ಕೆ ಕಳೆದ ನಾಲ್ಕು ತಿಂಗಳಿಂದ ತಾಲೂಕಾಡಳಿತದಿಂದ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಮೂರು ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿಯ ಮುಂದೆ ಪ್ರತಿಭಟನೆ ಮಾಡಿ ಪಿಡಿಒ ದಶರಥ ಭೋಸಲೆ ಅವರನ್ನು ತರಾಟೆಗೆ ತೆಗೆದುಕೊಂಡರು ಈ ಮಧ್ಯೆ ಪಿಡಿಒ ಮಾತನಾಡಿ, ಗ್ರಾಮಕ್ಕೆ ಸಾಕಾಗುವಷ್ಟು ಸ್ಥಳೀಯವಾಗಿ ನೀರು ಲಭ್ಯವಾಗುತ್ತಿಲ್ಲ ಎನ್ನುವ ಅವರ ಉತ್ತರಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಹುಬ್ಬರವಾಡಿ ಗ್ರಾಮಕ್ಕೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ದಿನನಿತ್ಯ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು ಕಳೆದ ಎರಡು ತಿಂಗಳಿಂದ ಕೃಷ್ಣಾ ನದಿ ಬತ್ತಿ ಹೊಗಿದ್ದರಿಂದ ಇಲ್ಲಿಂದ ಪೂರೈಕೆಯಾಗುವ ಕುಡಿಯುವ ನೀರು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರು ಹಾಗೂ ತೋಟಪಟ್ಟಿಗಳ ಜನ ಹಾಗೂ ಜಾನವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ರಾಯಬಾಗ ತಾಲೂಕಾ ಆಡಳಿತದಿಂದ ಟ್ಯಾಂಕರ್ ಮೂಲಕ ಪೂರೈಕೆ ಮಾಡುವ ಕುಡಿಯುವ ನೀರು ಸರಿಯಾಗಿ ವಿತರಣೆಯಾಗುತ್ತಿಲ್ಲ. ಮೂರು ನಾಲ್ಕು ದಿನಗಳಿಗೊಮ್ಮೆ ಪೂರೈಸಿದರೂ ಸಾಕಾಗುವಷ್ಟು ನೀರು ಕೊಡುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ನೀರು ಪೂರೈಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಧರೆಪ್ಪ ಬಿರನಾಳೆ, ಲಗಮವ್ವಾ ಡಬ್ಬನ್ನವರ, ಪ್ರಕಾಶ ಭಜಂತ್ರಿ, ಸಿದ್ದಪ್ಪ ಕೊಂಕಣಿ, ಕುಮಾರ ಸುತಾರ, ಬೀರಪ್ಪ ಹಿಡಕಲ್ಲ, ನಿಂಗಪ್ಪ ಪಾಟೀಲ, ಶ್ರೀಶೈಲ ಡಬ್ಬನ್ನವರ, ಪಾಂಡುರಂಗ ತಳವಾರ, ಅಮರ ಡಬ್ಬನ್ನವರ, ಪುತಳಾ ಬಡೋದೆ, ಹೀರಾಬಾಯಿ ಕಾಂಬಳೆ ಸೇರಿದಂತೆ ಅನೇಕರು ಇದ್ದರು.