Advertisement

ಕಾರ್ಮಿಕರ ವಜಾ ಖಂಡಿಸಿ ಪ್ರತಿಭಟನೆ

05:45 AM Jun 03, 2020 | Lakshmi GovindaRaj |

ಕೆ.ಆರ್‌.ಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿಲ್ಲ ಎಂದು ನೆಪವೊಡ್ಡಿ ಕಾರ್ಮಿಕರನ್ನು ವಜಾಗೊಳಿಸಿದ ಮಾಲೀಕರ ಕ್ರಮ ಖಂಡಿಸಿ ನೂರಾರು ಗಾರ್ಮೆಂಟ್ಸ್‌ ನೌಕರರು ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.  ಭಟ್ಟರಹಳ್ಳಿ ಸಮೀಪದ ಅರವಿಂದ್‌ ಗಾರ್ಮೆಂಟ್ಸ್‌ ಲಾಕ್‌ಡೌನ್‌ ನೆಪವೊಡ್ಡಿ ಬಲವಂತವಾಗಿ ರಾಜೀನಾಮೆ ಪಡೆದು ಕೆಲಸದಿಂದ ತೆಗೆದು ಹಾಕುತ್ತಿರುವ ಕಂಪನಿಅಡಳಿತ ಮಂಡಳಿ ಕ್ರಮ ಖಂಡಿಸಿ ನೂರಾರು ಮಹಿಳಾ  ನೌಕರರು ಕಂಪನಿ  ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಲಾಕ್‌ಡೌನ್‌ ಜಾರಿಯಾದ ಬಳಿಕ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಕೆಲಸಕ್ಕೆ ಬರುವವರನ್ನು ಮನೆಯಲ್ಲಿ ಇರಲು ಸೂಚಿಸಿದ್ದರು. ಪ್ಯಾಕ್ಟರಿ ವತಿಯಿಂದ ನೀಡುತ್ತಿದ್ದ ಕ್ಯಾಬ್‌  ಸೌಲಭ್ಯವನ್ನು ನಿಲ್ಲಿಸಿದ್ದಾರೆ. ದೂರದಿಂದ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ, ಎರಡು ತಿಂಗಳಿನಿಂದ ಸಂಬಳವೂ ನೀಡಿಲ್ಲ, ಇದೀಗ ಒತ್ತಾಯಪೂರ್ವಕವಾಗಿ ರಾಜೀನಾಮೆ ಪತ್ರ  ಬರೆಸಿಕೊಂಡು ಕೆಲಸದಿಂದ ತೆಗೆಯುತ್ತಿದ್ದಾರೆ.

ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವನ ದುಸ್ತರವಾಗಿದೆ. ಈ ಸಮಯದಲ್ಲಿ ಮಾಡಲು ಕೆಲಸವೂ ಇಲ್ಲದಂತಾದರೆ ನಾವು ನಮ್ಮ ಮಕ್ಕಳನ್ನು ಸಾಕುವುದು ಹೇಗೆ ಎಂದು ಕಾರ್ಮಿಕರು  ಅಳಲು ತೋಡಿಕೊಂಡರು. ಆಡಳಿತ ಮಂಡಳಿ ನಮ್ಮನ್ನು ವಂಚಿಸಿ ರಾಜೀನಾಮೆ ಪತ್ರಕ್ಕೆ ಹೆಬ್ಬೆಟ್ಟು ಮುದ್ರೆ ಪಡೆದಿದೆ. ಕೇಂದ್ರ ಸರ್ಕಾರ ವೇತನ ಕಡಿತಗೊಳಿಸಬಾರದು ಎಂದು ಆದೇಶಿಸಿದ್ದರೂ, ಈವರೆಗೂ ಸಂಬಳ ನೀಡಿಲ್ಲ. ಅರ್ಧ  ಸಂಬಳ ನೀಡುವಂತೆ ಮನವಿ ಮಾಡಿದ್ದೇವೆ. ಅದಕ್ಕೂ ಸ್ಪಂದಿಸುತ್ತಿಲ್ಲ ಎಂದು ಕಾರ್ಮಿಕರು ದೂರಿದರು. ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ 750ಕ್ಕೂ ಕಾರ್ಮಿಕರಿದ್ದು, 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ.

ಸ್ಥಳೀಯರನ್ನು ಉಳಿಸಿಕೊಂಡಿರುವ ಗಾರ್ಮೆಂಟ್ಸ್‌ ಸಂಸ್ಥೆ ದೂರದ ಗ್ರಾಮಾಂತರ ಪ್ರದೇಶದಿಂದ ಬರುವವರನ್ನು ಕೆಲಸದಿಂದ ತೆಗೆಯುತ್ತಿರುವ ಕಂಪನಿಯ ಕ್ರಮ ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಕೆಲಸ ಬಿಡುವುದಿಲ್ಲ, ಸಂಬಳ  ನೀಡಿ ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಎಸಿಪಿ ಮನೋಜ್‌ ಕುಮಾರ್‌, ಕೆ.ಆರ್‌.ಪುರ ಠಾಣೆ ವೃತ್ತ ನಿರೀಕ್ಷಕ ಅಂಬರೀಶ್‌ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದರು.

ಕಂಪನಿ ರಾಜೀನಾಮೆ ಕೇಳಿಲ್ಲ: ಕೋವಿಡ್ದಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಕಡಿಮೆಯಾಗಿದೆ. ಸದ್ಯ ಗಾರ್ಮೆಂಟ್ಸ್‌ ನಷ್ಟದಲ್ಲಿದೆ. ಕಂಪನಿ ಮುಚ್ಚುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಕಂಪನಿ ನಷ್ಟದಲ್ಲಿರುವು  ದರಿಂದ ಸ್ವಇಚ್ಛೆಯಿಂದ ಕೆಲವರು ರಾಜೀನಾಮೆ ಕೊಡುತ್ತಿದ್ದಾರೆ ಹೊರತು ಕಂಪನಿ ರಾಜೀನಾಮೆ ಕೇಳಿಲ್ಲ. ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ನಂತರ ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಅರವಿಂದ್‌  ಗಾರ್ಮೆಂಟ್ಸ್‌ನ ವ್ಯವಸ್ಥಾಪಕ ನಾಗೇಶ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next