ಬಿಹಾರ: ಪಾಟ್ನಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ (CTET) ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ʻಪ್ರತಿಭಟನಾಕಾರರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ. ಅಲ್ಲದೇ ಸರ್ಕಾರಿ ಆಸ್ತಿ ಪಾಸ್ತಿಗಳಿಗೂ ಹಾನಿಯಾಗಿದೆʼ ಎಂದು ಬಿಹಾರ ಕಾನೂನು ಮತ್ತು ಸುವ್ಯವಸ್ಥೆ ಡಿಎಸ್‌ಪಿ ನೂರುಲ್ ಹಾಕ್ ಹೇಳಿದ್ದಾರೆ.
ʻಪ್ರತಿಭಟನಾಕಾರರು ಈ ಕಾರಣಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು. ಹೀಗಾಗಿ ಅವರನ್ನು ತಡೆಯಲು ಪೊಲೀಸರು ಲಾಠಿಯನ್ನು ಹೊರತೆಗೆಯಬೇಕಾಯಿತುʼ ಎಂದು ಅವರು ಹೇಳಿದ್ಧಾರೆ.
ಈ ಮೊದಲು ಬಿಹಾರ ಸರಕಾರ ರಾಜ್ಯದ ಸರಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಕೇವಲ ತಮ್ಮ ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
ಆದರೆ ಕಳೆದ ಮಂಗಳವಾರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಕ್ಯಾಬಿನೆಟ್ ಸಭೆಯ ವೇಳೆ, ದೇಶದ ಯಾವುದೇ ಸ್ಥಳದ ಅರ್ಹ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು ಎಂದು ಆದೇಶ ಹೊರಡಿಸಿತ್ತು.
ಈ ನಿರ್ಣಯದಿಂದಾಗಿ ಆಕ್ರೋಶಗೊಂಡಿದ್ದ ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯ ಆಕಾಂಕ್ಷಿಗಳು ಶನಿವಾರ ಪಾಟ್ನಾದಲ್ಲಿ ಪ್ರತಿಭಟನೆ ಕೈಗೊಂಡಿದ್ದರು.
ಇದನ್ನೂ ಓದಿ: ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಮಲಗಿದವರ ಮೇಲೆ ನೀರು ಸುರಿದ ಪೊಲೀಸ್ ಅಧಿಕಾರಿ…