ಕೋಲ್ಕತಾ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮಂಗಳವಾರ “ನಬನ್ನಾ ಅಭಿಜಾನ್'(ಸರಕಾರಿ ಸಚಿವಾಲಯ ಕಟ್ಟಡ ಮುತ್ತಿಗೆ) ಕರೆ ಹಿನ್ನೆಲೆಯಲ್ಲಿ ಕೋಲ್ಕತಾದ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆದಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿ, ಸಚಿವಾಲಯ ಕಟ್ಟಡಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ವೇಳೆ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ನಡೆದಿದೆ.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ತಿರುಗೇಟು ನೀಡಿರುವ ಟಿಎಂಸಿ, ಬಿಜೆಪಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದಿದೆ. ಪ್ರತಿಭಟನೆಗೆ ಸಂಬಂಧಿಸಿದಂತೆ 200 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಎಲ್ಲೆಲ್ಲಿ ಸಂಘರ್ಷ?: ಕೋಲ್ಕತಾದ ಎಂ.ಜಿ.ರಸ್ತೆ, ಹೇಸ್ಟಿಂಗ್ಸ್ ರೋಡ್, ಪ್ರಿನ್ಸೆಪ್ ಘಾಟ್, ಸಂತ್ರಾಗಚಿ, ಹೌರಾ ಮೈದಾನ ಸುತ್ತಮುತ್ತ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಸಂಘರ್ಷ ನಡೆದಿದ್ದು, ಈ ವೇಳೆ, 29 ಪೊಲೀಸರು ಗಾಯಗೊಂಡಿದ್ದಾರೆ.
ಲಾಠಿ, ಜಲಫಿರಂಗಿ, ಅಶ್ರುವಾಯು ಬಳಕೆ: ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸುತ್ತಿದ್ದಂತೆ ಅವರನ್ನು ಚದುರಿಸಲು ಕೋಲ್ಕತಾ ಪೊಲೀಸರು ಲಾಠಿ ಪ್ರಹಾರ ನಡೆಸುವುದರ ಜತೆಗೆ ಜಲಫಿರಂಗಿ, ಅಶ್ರು ವಾಯು ಬಳಸಿದ್ದಾರೆ. “ನಾವು ಕಾನೂನು ಉಲ್ಲಂಘನೆ ಮಾಡಿರಲಿಲ್ಲ. ಆದರೂ ಪೊಲೀಸರು ನಮ್ಮನ್ನು ಥಳಿಸಿದ್ದಾರೆ’ ಎಂದು ಪ್ರತಿಭಟನಕಾರರೊಬ್ಬರು ತಿಳಿಸಿದ್ದಾರೆ.
ಲಾಠಿ ಪ್ರಹಾರಕ್ಕೆ ಬಿಜೆಪಿ ಖಂಡನೆ: ಆರೋಪಿಗಳನ್ನು ಮಮತಾ ಬ್ಯಾನರ್ಜಿ ರಕ್ಷಿಸುತ್ತಿದ್ದಾರೆಂದು ಆರೋಪಿಸಿರುವ ಬಿಜೆಪಿ, ವಿದ್ಯಾರ್ಥಿ ಪ್ರತಿಭಟನಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಮಮತಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಪೊಲೀಸ್ ಆಯುಕ್ತರ ಬೈಕ್ ಬಳಸಿದ್ದ ಆರೋಪಿ: ಬಿಜೆಪಿ
ಕೋಲ್ಕತಾ: ಅತ್ಯಾಚಾರ ಆರೋಪಿ ಪೊಲೀಸ್ ಆಯುಕ್ತರ ಬೈಕ್ ಬಳಕೆ ಮಾಡಿದ್ದಾನೆ ಎಂದು ಬಿಜೆಪಿ ಯ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಪೊಲೀಸರಿಗೆ ನೀಡುವ ವಾಹನಗಳನ್ನು ಆಯುಕ್ತರ ಹೆಸರಲ್ಲಿ ನೋಂದಣಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇಂದು ಬಿಜೆಪಿಯಿಂದ 12 ಗಂಟೆ ಬಂದ್‌ಗೆ ಕರೆ
ಪ್ರತಿಭಟನಕಾರರ ಮೇಲೆ ಪೊಲೀಸರ ದಬ್ಟಾಳಿ ಕೆಯನ್ನು ಖಂಡಿಸಿ ಬಿಜೆಪಿಯು ಬುಧವಾರ 12 ಗಂಟೆ ಬಂದ್‌ಗೆ ಕರೆ ನೀಡಿದೆ. ಬಂದ್ ವೇಳೆ ಸಾಮಾನ್ಯ ಜನರಿಗೆ ತೊಂದರೆಯಾಗ ದಂತೆ ನೋಡಿಕೊಳ್ಳಲಾಗುವುದು. ಜನರು ಈ ಬಂದ್‌ನಲ್ಲಿ ಪಾಲ್ಗೊಳ್ಳಬಾರದು. ಸರಕಾರವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿಗಳ ಸಲಹೆಗಾರ ಅಲಪಾನ್ ಬಂದೋಪಾಧ್ಯಾಯ ಹೇಳಿದ್ದಾರೆ. ಬಿಜೆಪಿಯು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸಲಿದೆ.