ದಾವಣಗೆರೆ: ರೈಲ್ವೆ ಅಪಘಾತದಲ್ಲಿ ಪತ್ನಿ ಜೊತೆಗೆ ತನ್ನ ಒಂದು ಕೈಯನ್ನು ಕಳೆದುಕೊಂಡಿರುವ ವ್ಯಕ್ತಿ ಜೀವನ ನಿರ್ವಹಣೆಗೆ ಸರ್ಕಾರದ ನೆರವು ಕೋರಿ ಬುಧವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ತನ್ನ ಮಕ್ಕಳೊಡನೆ ಪ್ರತಿಭಟಿಸಿದ ಘಟನೆ ನಡೆದಿದೆ.
ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದ ತಿಮ್ಮೇಶ್ ತನ್ನ ಮಕ್ಕಳಾದ ದಿನೇಶ್, ದಿವ್ಯಾ ಜೊತೆಗೂಡಿ ಪ್ರತಿಭಟನೆ ನಡೆಸಿ, ಸ್ವತಃ ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು, ನನ್ಮ ಅಳಲು ಕೇಳಿ, ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಪೊಲೀಸರು ಮತ್ತು ಮಕ್ಕಳ ಸಾಂತ್ವನ ಕೇಂದ್ರದ ಸಿಬ್ಬಂದಿ ತಿಮ್ಮೇಶ್ ಮತ್ತು ಆತನ ಮಕ್ಕಳನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಬಳಿಗೆ ಕರೆದೊಯ್ದರು. ಸೂಕ್ತ ನೆರವಿನ ಭರವಸೆ ದೊರೆಯಿತು.
ಘಟನೆ ಹಿನ್ನೆಲೆ: ಈಚಘಟ್ಟ ಗ್ರಾಮದ ತಿಮ್ಮೇಶ್ ಒಂದೂವರೆ ತಿಂಗಳ ಹಿಂದೆ ರೈಲು ಇಳಿಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದ ಪರಿಣಾಮ ಒಂದು ಕೈಯನ್ನೇ ಕಳೆದುಕೊಂಡಿದ್ದರಿಂದ ದುಡಿಮೆ ಮಾಡದಂತಾಗಿದ್ದರು.
ತಿಮ್ಮೇಶ್ ಪತ್ನಿ ತಿಮ್ಮಕ್ಕ ಸಹ ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಒಂದು ಕಡೆ ದುಡಿಯಲು ಆಗದ ಅಸಹಾಯಕತೆ ಮತ್ತೂಂದು ಕಡೆ ಮಕ್ಕಳ ಪೋಷಣೆಯ ಹೊರೆ. ಇದರಿಂದ ಜರ್ಜಿರಿತನಾದ ತಿಮ್ಮೇಶ್ ಜಿಲ್ಲಾಡಳಿತದ ನೆರವು ಕೋರಿ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.