Advertisement

ಭತ್ತ ತುಂಬಿದ್ದ ವಾಹನಗಳ ಜತೆ ಪ್ರತಿಭಟನೆ

07:20 AM Feb 03, 2019 | Team Udayavani |

ಮಳವಳ್ಳಿ: ಭತ್ತ ಒಕ್ಕಣೆ ಮಾಡಿ ತಿಂಗಳುಗಳೇ ಕಳೆದಿದ್ದು, ತಾಲೂಕು ಆಡಳಿತ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದಾಗಿ ರೈತರು ದಲ್ಲಾಳಿಗಳಿಗೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಾಪಂ ಸಭೆಯಲ್ಲಿ ಸದಸ್ಯರು ಆರೋಪ ಮಾಡಿದರು.

Advertisement

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಶ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಸದಸ್ಯ ಪುಟ್ಟಸ್ವಾಮಿ, ತಾಲೂಕಿನ ರೈತರು ಭತ್ತ ಒಕ್ಕಣೆ ಮಾಡಿ ಎರಡು ತಿಂಗಳು ಕಳೆದರೂ ತಾಲೂಕು ಆಡಳಿತ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ಜಿಲ್ಲಾಡಳಿತಕ್ಕೆ ಸಮರ್ಪಕ ಮಾಹಿತಿ ನೀಡಿ ಖರೀದಿ ಕೇಂದ್ರ ತೆರೆಯಲು ಮುಂದಾಗದ ಅಧಿಕಾರಿಗಳಿಗೆ ರೈತರ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಇತರೆ ಸದಸ್ಯರು ಧ್ವನಿ ಗೂಡಿಸಿದರು. ಈ ವೇಳೆ ಸ್ಪಷ್ಟನೆ ನೀಡಿದ ಆಹಾರ ಇಲಾಖೆ ಅಧಿಕಾರಿ ಕೃಷ್ಣಯ್ಯ, ಈ ವಾರದಲ್ಲಿ ಖರೀದಿ ಕೇಂದ್ರವನ್ನು ತೆರೆಯಲು ಕ್ರಮವಹಿಸಲಾಗಿದೆ ಎಂದು ಹೇಳಿ ಸುಮ್ಮನಾದರು.

ರಾಜಕೀಯ ಪ್ರೇರಿತ ಕೆಲಸ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್‌ ಇಲಾಖೆ ವರದಿ ಮಂಡಿಸುತ್ತಿದ್ದ ವೇಳೆ ಸದಸ್ಯರಾದ ದೊಡ್ಡಯ್ಯ ಮತ್ತು ಪುಟ್ಟಸ್ವಾಮಿ ಮಾತನಾಡಿ, ಕೃಷಿ ಸಹಾಯಕ ನಿರ್ದೇಶಕರು ತಮ್ಮ ಕಚೇರಿಯಲ್ಲಿ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ.

ಸರ್ಕಾರದ ಯೋಜನೆಗಳ ಬಗ್ಗೆ ತಾಪಂ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷ ನಾಗೇಶ್‌ ಪ್ರತಿಕ್ರಿಯಿಸಿ ಈ ಬಗ್ಗೆ ಆರೋಪಗಳು ನನಗೂ ಕೇಳಿಬಂದಿದ್ದು, ಮುಂದಿನ ದಿನಗಳಲ್ಲಿ ಇದು ಮರುಕಳಿಸಿದರೆ ನಿಮ್ಮ ವಿರುದ್ಧ ಕ್ರಮ ವಹಿಸಬೇ ಕಾಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.

Advertisement

3 ಕೋಟಿ. ರೂ.ಅನುದಾನ: ತೋಟಗಾರಿಕೆ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ಸರ್ಕಾರದಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 1.8 ಕೋಟಿ ರೂ. ವಿನಿಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಫ‌ಲಾನುಭವಿಗಳಿಗೆ ಅನುದಾನ ಬಳಕೆ ಮಾಡಲು ಕ್ರಮ ವಹಿಸಲಾಗುವುದು.

ವಿವಿಧ ತೋಟಗಾರಿಕೆ ಬೆಳೆಗಳಿಗೆ ಶೇ.90 ಸಹಾಯಧನ ನೀಡಲಾಗುತ್ತಿದೆ. ತರಕಾರಿ ಬೆಳೆಗೆ ಶೇ.40, ಬಾಳೆ ಮತ್ತು ಕಲ್ಲಂಗಡಿ ಬೆಳೆಗೆ ಶೇ.33 ಹಾಗೂ ತೆಂಗು, ಮಾವು ಬೆಳೆಯಲು ಎಕರೆಗೆ 8500 ರೂ., ಹಳೆಯ ತೆಂಗಿನ ಮರಗಳನ್ನು ಕಿತ್ತು ಹೊಸದಾಗಿ ತೆಂಗಿನ ಸಸಿಗಳನ್ನು ಹಾಕಲು ಹೆಕ್ಟೇರ್‌ಗೆ 35 ಸಾವಿರ ರೂ. ಸಹಾಯಧನ ಸಿಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಕೇಶ್‌ ಮಾಹಿತಿ ನೀಡಿದರು.

ಖಾಸಗಿಯವರಿಂದ ಒತ್ತುವರಿ: ಸದಸ್ಯ ಪುಟ್ಟಸ್ವಾಮಿ ಹಿಟ್ಟನಹಳ್ಳಿ ಕೊಪ್ಪಲು ಬಳಿ ಇರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಇದರ ಬಗ್ಗೆ ಕಳೆದ ಹಲವು ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಇಲಾಖೆಗೆ ಸಂಬಂಧಿಸಿ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದು ರೈತರಿಗೆ ಅನುಕೂಲವಾಗುವಂತೆ ತೋಟಗಾರಿಕೆ ಬೆಳೆಗಳ ತರಬೇತಿ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಗೊಳಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸರ್ಕಾರದಿಂದ ಬಿಡುಗಡೆಯಾರುವ ಅನುದಾನ ಬಳಕೆಯಾಗಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಸಭೆ ಆರಂಭಕ್ಕೂ ಮುನ್ನಾ ಸಿದ್ಧಗಂಗಾ ಮಠ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಗೆ ಕೆಲಕಾಲ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸಿ.ಮಾಧು, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಯ್ಯ, ಇಒ ಸತೀಶ್‌, ಯೋಜನಾಧಿಕಾರಿ ಬಾಬು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next