Advertisement

ಸುಪ್ರೀಂ ತೀರ್ಪು ವಿರೋಧಿಸಿ ಇಂದು ಪ್ರತಿಭಟನೆ

09:55 PM Feb 14, 2020 | Lakshmi GovindaRaj |

ಮೈಸೂರು: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂಕೋರ್ಟ್‌ ತೀರ್ಪು ಆಘಾತಕಾರಿಯಾದದ್ದು, ಈ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಒತ್ತಾಯಿಸಿದರು.

Advertisement

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪರಿಕಲ್ಪನೆಗೆ ವಿರುದ್ಧವಾದ ಸುಪ್ರೀಂಕೋರ್ಟ್‌ನ ತೀರ್ಪು ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜನರ ನಿದ್ದೆಗೆಡಿಸಿರುವುದಲ್ಲದೆ, ಜನರ ಮನಸ್ಸನ್ನು ಘಾಸಿಗೊಳಿಸಿದೆ. ಸುಪ್ರೀಂಕೋರ್ಟ್‌ ತೀರ್ಪು ವಿರೋಧಿಸಿ ಶನಿವಾರ ಬೆಳಗ್ಗೆ 11ಗಂಟೆಗೆ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ಅದರ ವಿರೋಧಿಗಳೇ ಕುಳಿತಿದ್ದಾರೆ ಎಂದು ಅಂಬೇಡ್ಕರ್‌ ಹೇಳಿದ್ದರು. ಇಂದು ದೇಶ ಆಳುವವರು ಆ ಮಾತಿಗೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮೀಸಲಾತಿ ಪರಾಮರ್ಶೆ ಮಾಡುವ ಅಗತ್ಯವಿದೆ ಎಂದರೆ, ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎನ್ನುತ್ತಾರೆ.

ಈ ರೀತಿ ಒಂದಾದ ಮೇಲೆ ಒಂದರಂತೆ ಸಂವಿಧಾನದ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ. ಇದರಿಂದ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕೋಮುವಾದದ ಮೂಲಕ ಸಂವಿಧಾನವನ್ನು ಬುಡಮೇಲು ಮಾಡಲು ನೋಡುತ್ತಿದ್ದು, ಕೋಮುವಾದಿಗಳು ಸಂವಿಧಾನದ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ದೂರಿದರು.

ಸುಪ್ರೀಂಕೋರ್ಟ್‌ನ ಈ ತೀರ್ಪು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮಾತ್ರ ಅನ್ವಯವಾಗಲ್ಲ. ಹಿಂದುಳಿದ ವರ್ಗಗಳು ಸೇರಿದಂತೆ ಮೀಸಲಾತಿ ಪಡೆಯುವ ಮೇಲ್ವರ್ಗದವರಿಗೂ ಅನ್ವಯವಾಗಲಿದೆ. ಹೀಗಾಗಿ ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಮೀಸಲಾತಿಯಡಿ ಗೆದ್ದು ಹೋಗಿರುವ ಸಂಸದರು ಈ ಬಗ್ಗೆ ಧ್ವನಿ ಎತ್ತುವ ಮೂಲಕ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದರು.

Advertisement

ತಿದ್ದುಪಡಿ: ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಜನರ ಮೂಲಭೂತ ಹಕ್ಕು ರಕ್ಷಣೆ ಮಾಡಬೇಕು. ಈ ಸಂಬಂಧ ಎಲ್ಲರೂ ಒಟ್ಟಾಗಿ ಕೇಂದ್ರಸರ್ಕಾರಕ್ಕೆ ಒತ್ತಾಯ ತರಬೇಕು. ದೇಶದ ಜನತೆ ವಿರೋಧ ಪಕ್ಷವೇ ಇಲ್ಲದ ರೀತಿಯಲ್ಲಿ ಬಿಜೆಪಿಗೆ ಬಹುಮತ ನೀಡಿದ್ದಾರೆ. ಆದರೆ, ಕೋಮುವಾದಿ ಸರ್ಕಾರ ಜನರಲ್ಲಿ ಭಯ ಹುಟ್ಟಿಸುತ್ತಿದ್ದು, ಪ್ರಭುತ್ವ ಸಂವಿಧಾನದ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಸ್ವಾಗತಾರ್ಹ: ರಾಜಕೀಯ ಅಪರಾಧೀಕರಣ ಹೆಚ್ಚುತ್ತಿರುವ ಈ ದಿನಗಳಲ್ಲಿ ಕ್ರಿಮಿನಲ್‌ ಹಿನ್ನೆಲೆ ಇರುವವರನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹವಾದದ್ದು, ರಾಜಕೀಯ ಅಪರಾಧೀಕರಣದಿಂದಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಹಣದಿಂದ ಚುನಾವಣೆ ನಡೆಸುವುದು ಕೆಟ್ಟಪದ್ಧತಿ.

ಹಣವಿಲ್ಲದೆ ಚುನಾವಣೆ ನಡೆಸುವುದು ಆರೋಗ್ಯಕರ, ಜತೆಗೆ ಪ್ರಜಾಪ್ರಭುತ್ವದ ಬಲವರ್ಧನೆ ದೃಷ್ಟಿಯಿಂದಲೂ ಉತ್ತಮ. ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ರಾಜಕೀಯ ಶುದ್ಧೀಕರಣ ಆಗಬೇಕಾದ ಅವಶ್ಯಕತೆ ಇದೆ ಎಂದರು. ಕೆಪಿಸಿಸಿ ವಕ್ತಾರರಾದ ಎಂ.ಲಕ್ಷ್ಮಣ, ಮಂಜುಳಾ ಮಾನಸ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ನಗರ ಅಧ್ಯಕ್ಷ ಆರ್‌.ಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next