ಜೇವರ್ಗಿ: ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಬಗ್ಗೆ ಅಗೌರವದಿಂದ ಮಾತನಾಡಿದ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಕೆ.ಎನ್. ರಾಜಣ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಗರ ಘಟಕದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಸಲಗರ ಮಾತನಾಡಿ, ಈ ನಾಡು ಕಂಡ ಧೀಮಂತ ರಾಜಕಾರಣಿ ದೇವೇಗೌಡರ ಬಗ್ಗೆ ಕಾಂಗ್ರೆಸ್‌ನ ಮಾಜಿ ಶಾಸಕ ರಾಜಣ್ಣ ಕೆಟ್ಟದಾಗಿ ಮಾತನಾಡಿ ಅವರ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ದೇವೇಗೌಡ ಅವರ ಬಗ್ಗೆ ಅಗೌರವದಿಂದ ಮಾತನಾಡಿದ ರಾಜಣ್ಣ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಂಡು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ನಗರ ಘಟಕದ ಅದ್ಯಕ್ಷ ಎಂ.ಡಿ.ರೌಫ್ ಹವಾಲ್ದಾರ್, ಮುಖಂಡರಾದ ಶಂಕರ ಕಟ್ಟಿಸಂಗಾವಿ, ಮಕ್ಬೂಲ್ ಪಟೇಲ ಮಲ್ಲಾಬಾದ, ಇಮ್ರಾನ್ ಇನಾಂದಾರ, ಮುಕೀಬ್ ಗುತ್ತೇದಾರ, ಶಬ್ಬೀರ್ ಇನಾಂದಾರ, ಪತ್ರು ಪಟೇಲ, ಅಬ್ದುಲ್ ರಹೇಮಾನ, ಅಪ್ರೋಜ್ ಪಟೇಲ್, ಇಮ್ತಿಯಾಜ್ ಅಲಿ ಧಖನಿ, ಹಾಜೀ ಮುನಸಿ, ನಿಂಗಣ್ಣ ನಾಟೀಕಾರ, ಶಕೀಲ್ ಪಟೇಲ, ಯುನೂಸ್, ರಫೀಕ್ ಡಿ.ಕೆ, ಕರಿಂ ಜಮಾದಾರ, ಅಲಿಸಾಬ್ ಯಾತನೂರ, ಅಬ್ದುಲ್ ಇನಾಂದಾರ, ಶಹಾಬುದ್ಧೀನ್ ವರವಿ, ಶಾಹೀದ್ ಗಂವ್ಹಾರ ಸೇರಿದಂತೆ ಹಲವರು ಇದ್ದರು.