ನೆಲಮಂಗಲ: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಕಾರ್ಖಾನೆ ಆಡಳಿತ ಮಂಡಳಿ ಒತ್ತಾಯಿಸಿ, ಹಿಮಾಲಯ ಡ್ರಗ್ಸ್ ಕಂಪನಿಯ ಕಾರ್ಮಿಕ ಸಂಘಟನೆ ಮುಖಂಡರು ಮತ್ತು ಸದಸ್ಯರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ತುಮಕೂರಯ ಹೆದ್ದಾರಿ 4ರಲ್ಲಿರುವ ಮಾಕಳಿ ಗ್ರಾಮದಲ್ಲಿರುವ ಹಿಮಾಲಯ ಡ್ರಗ್ಸ್ ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಕಂಪನಿಯಲ್ಲಿರುವ ಕರ್ನಾಟಕ ವರ್ಕರ್ ಯೂನಿಯನ್, ಬಿಎಂಎಸ್ ಯೂನಿಯನ್, ಹಿಮಾಲಯ ವರ್ಕರ್ ಯೂನಿಯನ್ ಸಂಘಟನೆಗಳ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕಾರ್ಮಿಕ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಾತನಾಡಿ, ಕಂಪನಿಯಲ್ಲಿ ಮೂರೂವರೆ ವರ್ಷಕ್ಕೊಮ್ಮೆ ಸನ್ನದ್ದು ಬೇಡಿಕೆ ಯನ್ನು ಬಿಡುತ್ತದೆ. ಈ ವೇಳೆ ಕಾರ್ಮಿಕ ಸಂಘಟನೆ ನೀಡಿದ ಸನ್ನದ್ದು ಬೇಡಿಕೆಯ ಪಟ್ಟಿ ನೀಡಲಾಗುತ್ತದೆ. ಅದರಂತೆ ಆಡಳಿತ ಮಂಡಳಿ ಪಟ್ಟಿಯನ್ನು ಪರಿಶೀಲಿಸಿ ಬೇಡಿಕೆಯನ್ನು ಈಡೇರಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಾಗಲೇ ನಾವು ಸನ್ನದ್ದು ಬೇಡಿಕೆಯನ್ನು ಸಲ್ಲಿಸಿ ಹತ್ತು ತಿಂಗಳು ಕಳೆದರೂ ಆಡಳಿತ ಮಂಡಳಿ ಈಡೇರಿಸದೆ ಕೇವಲ 4,600 ರೂ. ವೇತನವನ್ನು ಮಾತ್ರ ಹೆಚ್ಚಿಸಿದ್ದು ಬೇಸರದ ಸಂಗತಿ ಎಂದರು.
ಪ್ರಸ್ತುತ ಸಮಸ್ಯೆ ಅವಲೋಕಿಸಿ: ಇತ್ತಿಚೇಗೆ ಎದುರಾದ ಕೋವಿಡ್ ಓಮಿಕ್ರಾನ್ ಮತ್ತಿತರ ಸಾಂಕ್ರಾಮಿಕ ಪಿಡುಗುಗಳಿಂದ ಕಾರ್ಮಿಕರ ಜೀವನ ಅಸ್ತವ್ಯಸ್ತವಾಗಿದೆ. ಮಕ್ಕಳಿಗೆ ಶಿಕ್ಷಣ ಮತ್ತಿತರ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತಿಲ್ಲ, ಪ್ರಸ್ತುತ ಸಮಸ್ಯೆಯನ್ನು ಅವಲೋಕಿಸಿ ಕಾರ್ಮಿಕರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಪ್ರಸ್ತುತ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ. ಕಂಪನಿಯ ವಿರುದ್ಧವಲ್ಲ ಎಂದರು.
ಮಾ.24ಕ್ಕೆ ಒಂದು ದಿನ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನೆಗೆ ಮಣಿಯದಿದ್ದರೆ ಹೋರಾಟವನ್ನು ತೀವ್ರಗೊಳಿ ಸುವುದರೊಂದಿಗೆ ಕಾನೂನು ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಏಕಪಕ್ಷೀಯ ನಿರ್ಧಾರ: ಕಾರ್ಮಿಕ ಸಂಘಟನೆ ಅಧ್ಯಕ್ಷ ಮಾರವೆಂಕಟಪ್ಪ ಮಾತನಾಡಿ, ಮೂರು ಸಭೆಗಳಲ್ಲಿಯೇ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಆಡಳಿತ ಮಂಡಳಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ. ಕಾರ್ಮಿಕ ಮುಖಂಡರಿಗೆ ಕನಿಷ್ಠ ಗೌರವವನ್ನು ನೀಡದ ಆಡಳಿತ ಮಂಡಳಿಯ ಕ್ರಮ ಖಂಡನೀಯ ಎಂದರು. ಕಾರ್ಮಿಕ ಸಂಘಟನೆ ಜಂಟಿ ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ವೆಂಕಟೇಶ್, ಗಂಗರಾಜು, ಪದಾಧಿಕಾರಿ ಮಹಮದ್ ಹುಸೇನ್, ಬಸವನಹಳ್ಳಿ ಸಿದ್ದರಾಜು, ರಾಘವೇಂದ್ರ ಮತ್ತಿತರರು ಇದ್ದರು.