ಹಿರೇಬಾಗೇವಾಡಿ: ಸಾರ್ವಜನಿಕ ಸಮರ್ಪಕ ಸೇವೆ ನಿರ್ವಹಣೆಯಲ್ಲಿ ವಿಫಲರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧೋರಣೆ ಖಂಡಿಸಿ ಸ್ಥಳೀಯ ಗ್ರಾಪಂ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು, ರೈತರು, ಸಾರ್ವಜನಿಕರ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದಕ್ಕೂ ಮೊದಲು ಸ್ಥಳೀಯ ಚಾವಡಿ ಕೂಟದಿಂದ ಮರವಣಿಗೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನ ವಿರೋಧಿ ನೀತಿ ವಿರುದ್ಧ ಧಿಕ್ಕಾರ ಕೂಗುತ್ತ ಟೋಲ್ ಗೇಟ್ ಎದುರು ಧರಣಿ ಕೈಗೂಳ್ಳಲಾಯಿತು.
ಪ್ರತಿಭಟನೆಯಲ್ಲಿ ಬಸವಣ್ಣಿಪ್ಪ ಗಾಣಿಗಿ, ಬಾಪು ನಾವಲಗಟ್ಟಿ, ಗ್ರಾಪಂ ಸದಸ್ಯ ಸುರೇಶ ಇಟಗಿ, ಶ್ರೀಕಾಂತ ಮಾಧುಭರಣ್ಣವರ, ಯಲ್ಲಪ್ಪ ಧರೆಣ್ಣವರ, ಬಿ.ಎನ್. ಪಾಟೀಲ, ಅಡಿವೇಶ ಇಟಗಿ ಮಾತನಾಡಿ, ಹಲವಾರ ವರ್ಷಗಳಿಂದ ಇಲ್ಲಿನ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಭಾಗದಲ್ಲಿರುವ ಈ ಟೋಲ್ ಗೇಟ್ ಬೇಡವೆ ಬೇಡ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಜನರ ಮನ ಒಲಿಸಲು ಪ್ರಯತ್ನಿಸಿದರು. ಆಗ ಪ್ರತಿಭಟನಾಕಾರರು ಬಸವೇಶ್ವರ ವೃತ್ತ ಬಳಿ ಓವರ್ ಬ್ರಿಡ್ಜ್, ಪಾರಿಶ್ವಾಡ ಮಾರ್ಗವಾಗಿ ಹೋಗಲು ಅಂಡರ್ ಬ್ರಿಡ್ಜ್, ಸರ್ಮಿಸ್ ರಸ್ತೆ ಸಹಿತ ವಿದ್ಯುತ್ ಅಳವಡಿಕೆ, ಸಿದ್ದನ ಬಾಂವಿ ಕೆರೆ ನೀರು ಎಡದಿಂದ ಬಲಕ್ಕೆ ಪೈಪ್‌ಲೈನ್ ಹಾಕಿ ನೀರು ಹೋಗುವಂತೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮನವಿ ಪತ್ರ ನೀಡಿ ಕಾರ್ಯ ಕೈಗೊಳ್ಳವ ಬಗ್ಗೆ ಹಾಗೂ ಕಾಲ ಮಿತಿಯನ್ನು ನಮೂದಿಸಿ ಬರೆದು ಕೊಡುವುದಾದರೆ ಮಾತ್ರ ಧರಣಿ ಹಿಂತೆಗೆದುಕೊಳ್ಳವುದಾಗಿ ಶರತ್ತು ವಿಧಿಸಿದರು.
ಇದಕ್ಕೆ ಒಪ್ಪಿಗೆ ಸೂಚಿಸಿದ ಅಧಿ ಕಾರಿಗಳು ಇನ್ನೂ ಕಾಮಗಾರಿಗಳನ್ನು 15 ದಿನಗಳಲ್ಲಿ ಅಂದಾಜು ಪತ್ರಿಕೆ ತಯಾರಿಸಿ ಎನ್.ಹೆಚ್ .ಎ.ಐ ಬೆಂಗಳೂರು ಅವರಗೆ ಕಳುಹಿಸಿ ಕೊಡಲಾಗುವುದು ಎಂದು ಗ್ರಾಪಂಗೆ ಲಿಖೀತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಉಪಾಧ್ಯಕ್ಷೆ ಹಸೀನಾ ಬಾನು ಮದರಂಗಿ, ಗ್ರಾಪಂ ಸದಸ್ಯರಾದ ಗೌಸಮೊಹಿªನ ಜಾಲಿಕೊಪ್ಪ, ಸಂಜಯ ದೇಸಾಯಿ, ಮಹಾತೇಂಶ ಘೋಡಗೇರಿ, ಚನ್ನಮಲ್ಲ ಕುಂಬಾರ, ರಾಜು ಪೋಲೇಶಿ, ರೇಣುಕಾ ಪಾಟೀಲ, ಈರಣ್ಣ ಜಪ್ತಿ, ಯಲ್ಲಪ್ಪ ಕೆಳಗೇರಿ, ಸಿ.ಸಿ.ಪಾಟೀಲ, ಮಂಜುನಾಥ ವಸ್ತ್ರದ, ಅಡಿವೇಶ ಇಟಗಿ, ಪ್ರಕಾಶ ಜಪ್ತಿ, ಪ್ರಶಾಂತ ದೇಸಾಯಿ ಸೇರಿದಂತೆ ಇತರರು ಇದ್ದರು.