ಚನ್ನಮ್ಮ ಕಿತ್ತೂರು: ದೇಮಟ್ಟಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಒಂದು ಬಸ್ ಹುಲಿಕಟ್ಟಿ ಕೊಟಬಾಗಿ ಕಡೆಯಿಂದ ಬರುತ್ತದೆ. ಅದು ಸಹ ಸಮಯಕ್ಕೆ ಸರಿಯಾಗಿ ಬರುವದಿಲ್ಲ. ಬಂದರೂ ಸಹಿತ ಅಲ್ಲಿಂದ ಬಸ್‌ನಲ್ಲಿ ಜಾಗವಿರದಷ್ಟು ತುಂಬಿಯೇ ಬರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಶೀಘ್ರವೇ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರೂ ಯಾವದೇ ರೀತಿ ಪ್ರಯೋಜನವಾಗಿಲ್ಲ. ಶೀಘ್ರವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ಈ ಸಮಸ್ಯೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಕಿತ್ತೂರಿನ ಟ್ರಾಫಿಕ್ ಕಂಟ್ರೋಲರ್ ಆರ್.ಎ. ನದಾಫ್, ಎಎಸ್‌ಐ ಕೆ.ಎಫ್. ಸನದಿ ಆಗಮಿಸಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಇಲ್ಲಿನ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸಿಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮಹೇಶ ಗದ್ದಿಕೇರಿ, ಲಕ್ಷ್ಮೀ ಕೊಳ್ಳಿ, ಜ್ಯೋತಿ ಕಂಬಾರ, ಲಕ್ಷ್ಮೀ ಹಾದಿಮನಿ, ಕಾವೇರಿ ದೊಡವಾಡ, ಸುಧಾ ಮೊಕಾಶಿ, ರಂಜೀತಾ ಕಿಲಾರಿ, ನಾಗಪ್ಪ ಅಪ್ಪೋಜಿ, ರವಿ ಕಂಬಾರ, ಮನೋಜ ಅಮ್ಮನಗಿ, ಮಣಿಕಂಠ ಅಂಬಡಗಟ್ಟಿ, ಮಾರುತಿ ಉಡಚಮ್ಮನವರ, ಈರಣ್ಣ ಕೊಳ್ಳಿ, ಸುನೀಲ ಹಾದಿಮನಿ, ಸಂಜನಾ ಹವಾಲ್ದಾರ ಸೇರಿದಂತೆ ಇತರರು ಇದ್ದರು.