ಆಳಂದ: 2010-11ನೇ ಸಾಲಿನ ಇಲ್ಲಿಯ ಪುರಸಭೆ ವ್ಯಾಪ್ತಿಯ ವಾಜಪೇಯಿ ನಗರ ಆಶ್ರಯ ಯೋಜನೆಯಲ್ಲಿ ಮಂಜೂರಾದ ಫಲಾನುಭವಿಗಳಿಗೆ 15 ದಿನಗಳಲ್ಲಿ ನಿವೇಶನದ ಹಕ್ಕುಪತ್ರ ನೀಡದಿದ್ದಲ್ಲಿ ಕಲಬುರಗಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಶಾಸಕ, ಬಿಜೆಪಿ ನಾಯಕ ಸುಭಾಷ ಗುತ್ತೇದಾರ ಹೇಳಿದರು.
ಬಿಜೆಪಿ ಕಾರ್ಯಕರ್ತರು ಮತ್ತು ಆಶ್ರಯ ಹಕ್ಕುಪತ್ರ ವಂಚಿತ ಫಲಾನುಭವಿಗಳು ಸೇರಿ ಬೇಡಿಕೆಗೆ ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ನಡೆಸಿದ ಎರಡನೇ ಪ್ರತಿಭಟನಾ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡದರು. ವಾಜಪೇಯಿ ನಗರ ಆಶ್ರಯ ಯೋಜನೆ ಅಡಿ ಸರ್ವೆ ನಂಬರ್ 750ರಲ್ಲಿ 15 ಎಕರೆ ಜಮೀನಿನಲ್ಲಿ 535 ನಿವೇಶನಗಳಿಗೆ 535 ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳಹಿಸಲಾಗಿದೆ.
ನಿಗಮದಿಂದ ಅನುಮೋದನೆಗೊಂಡ 332 ಮಹಿಳಾ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ 2014ರಲ್ಲೇ ಹಕ್ಕುಪತ್ರ ನೀಡುವಂತೆ ಆದೇಶಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೆ 11 ಮತ್ತು12 ಅಗಸ್ಟ್ 2014ರಂದು ತಹಶೀಲ್ದಾರ ಕಚೇರಿ ಎದುರು ಹೋರಾಟ ನಡೆಸಿದ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರು ಲಿಖೀತ ಪತ್ರದ ಮೂಲಕ ಕೂಡಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಮುಂದೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇದಕ್ಕೆ ಶಾಸಕ ಬಿ.ಆರ್. ಪಾಟೀಲರು ತಮ್ಮ ರಾಜಕೀಯ ಲಾಭಕ್ಕಾಗಿ ಇಂದಿಗೂ ಬಡವರಿಗೆ ಹಕ್ಕುಪತ್ರಗಳು ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಸ್ ನಿಲ್ದಾಣ, ರಜ್ವಿರೋಡ ಇನ್ನಿತರ ಮಾರ್ಗವಾಗಿ ತಹಸೀಲ್ದಾ ಕಚೇರಿ ವರೆಗೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮಹೇಶ ಗೌಳಿ, ಮಾಧ್ಯಮ ಪ್ರತಿನಿಧಿ ಮಹೇಶ ಹಿರೋಳಿ, ಚಂದ್ರಾಮಪ್ಪ ಘಂಟೆ, ರಾಜಶೇಖರ ಮಲಶೆಟ್ಟಿ, ದೀಲಿಪ ಕ್ಷೀರಸಾಗರ, ಮಲ್ಲಿಕಾರ್ಜುನ ಸಾವಳಗಿ ಇತರರು ಪಾಲ್ಗೊಂಡಿದ್ದರು.