ವಿಧಾನ ಪರಿಷತ್ತು: “ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದಿಸಬೇಕು’ ಎಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯ ರಘು ಆಚಾರ್ ಪ್ರತಿಭಟನೆ ನಡೆಸಿದರು.
ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಖಾಸಗಿ ವಿಧೇಯಕ ಮಂಡಿಸಲು ಅವಕಾಶ ನೀಡುವಂತೆ ರಘು ಆಚಾರ್ ವಿನಂತಿಸಿದರು. ಇದಕ್ಕೆ ಸಭಾಪತಿಗಳು ನಿರಾಕರಿಸಿದ್ದರಿಂದ ಅವರು ಸಭಾಪತಿಗಳ ಪೀಠದ ಎದುರು ಧಾವಿಸಿ ಪ್ರತಿಭಟನೆ ಆರಂಭಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಶಂಕರಮೂರ್ತಿ, “ಸದನದಲ್ಲಿ ಖಾಸಗಿ ವಿಧೇಯಕ ಮಂಡಿಸಲು ಕೆಲವು ನಿಯಮಗಳಿವೆ. ಅವುಗಳ ಅನುಸಾರವೇ ಮಂಡಿಸಬೇಕು. ರಘು ಆಚಾರ್ ಕೊಟ್ಟಿರುವ ವಿಧೇಯಕದ ಪ್ರತಿಯನ್ನು ಈಗಾಗಲೇ ಸಂಬಂಧಪಟ್ಟ ಕಾನೂನು ಮತ್ತು ಸಂಸದೀಯ ವಿಭಾಗಕ್ಕೆ ಕಳುಹಿಸಲಾಗಿದೆ. ಅವರು ಅದನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕು.
ಅಲ್ಲಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮುಂದಿನ ಅಧಿವೇಶನ ನಡೆದಾಗ ಅವಕಾಶ ನೀಡುವುದಾಗಿ’ ಹೇಳಿದರು.
ಇದಕ್ಕೆ ಒಪ್ಪದ ರಘು ಆಚಾರ್ ಪ್ರತಿಭಟನೆ ಮುಂದುವರಿಸಿದರು. ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, “ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಹೀಗೆ ಪ್ರತಿಭಟನೆ ಮಾಡುವುದನ್ನು ನೋಡಿದರೆ ಈ ಸರ್ಕಾರ ಯಾವ ಸ್ಥಿತಿಗೆ ತಲುಪಿದೆ ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಸದಸ್ಯರು, ರಘು ಆಚಾರ್ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯ ವಿ.ಎಸ್.ಉಗ್ರಪ್ಪ, ಖಾಸಗಿ ವಿಧೇಯಕ ಮಂಡಿಸುವ ಹಕ್ಕು ಸದನದ ಎಲ್ಲ ಸದಸ್ಯರಿಗೂ ಇದೆ. ಆದರೆ, ಸಮಯದ ಅಭಾವ ಇರುವುದರಿಂದ ಸದ್ಯಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಪ್ರತಿಭಟನೆ ಕೈ ಬಿಡಬೇಕೆಂದು ಮನವಿ ಮಾಡಿಕೊಂಡರು. ಸಚಿವ ತನ್ವೀರ್ ಸೇs… ಕೂಡ ಪ್ರತಿಭಟನೆ ಹಿಂಪಡೆಯುವಂತೆ ಆಗ್ರಹಿಸಿದರು. ನಂತರ ರಘು ಆಚಾರ್ ಪ್ರತಿಭಟನೆ ಹಿಂಪಡೆದರು.