Advertisement

ಸೌಲಭ್ಯಕ್ಕಾಗಿ ಕವಿವಿಯಲ್ಲಿ ಪ್ರತಿಭಟನಾ ರ್ಯಾಲಿ

12:31 PM Aug 11, 2017 | Team Udayavani |

ಧಾರವಾಡ: ಹಿಂದುಳಿದ ವರ್ಗಗಳು (ಒಬಿಸಿ), ಸಾಮಾನ್ಯ ವರ್ಗ (ಜಿಎಮ್‌), ಅಲ್ಪಸಂಖ್ಯಾತರು ಹಾಗೂ ಎಸ್‌.ಸಿ/ಎಸ್‌.ಟಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ ಎಐಡಿಎಸ್‌ಒ ಹಾಗೂ ಬಿವಿಎಸ್‌ ನೇತೃತ್ವದಲ್ಲಿ ನಗರದಲ್ಲಿ ಕವಿವಿಯಲ್ಲಿ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. 

Advertisement

ಪ್ರತಿಭಟನಾ ರ್ಯಾಲಿ ಬಳಿಕ ಧರಣಿ ಸತ್ಯಾಗ್ರಹದಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಅಕ್ಷಯ ಊರಮುಂದಿನ ಮಾತನಾಡಿ, ಧಾರವಾಡ ಜಿಲ್ಲಾದ್ಯಂತ ಮೂರು ವರ್ಷ ಬರಗಾಲ ಇದ್ದು, ರೈತರ, ಬಡ ಕಾರ್ಮಿಕ ಮಕ್ಕಳು ವಿದ್ಯಾಭ್ಯಾಸಕ್ಕೆ ಹಣವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. 

ಇಂತಹ ಒಂದು ಸಂದರ್ಭದಲ್ಲಿ ಹೆಚ್ಚುವರಿ ಶುಲ್ಕವನ್ನು ತುಂಬುವುದು ಅಸಾಧ್ಯವಾದ ಮಾತಾಗಿದೆ. ಆದ್ದರಿಂದ ಈ ಕೂಡಲೇ ಪ್ರವೇಶಾತಿ ಸಮಯದ ಹೆಚ್ಚುವರಿ ಶುಲ್ಕ ಕೈಬೀಡಬೇಕು ಮತ್ತು ಪಡೆದ ಹಣವನ್ನು ಈ ಕೂಡಲೇ ವಾಪಸ್‌ ನೀಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳು, ಸಾಮಾನ್ಯ ವರ್ಗ, ಅಲ್ಪಸಂಖ್ಯಾತರು ಹಾಗೂ ಎಸ್‌.ಸಿ/ಎಸ್‌.ಟಿ ವಿದ್ಯಾರ್ಥಿಗಳ ಹೆಚ್ಚುವರಿ ಶುಲ್ಕವನ್ನು ರದ್ದುಗೊಳಿಸಿ ಸಾಮಾನ್ಯ ಶುಲ್ಕದಲ್ಲಿ ಮೂಲಕ ಪ್ರವೇಶ ನೀಡಬೇಕು. ವಿದ್ಯಾರ್ಥಿಗಳ ಮಾಸಿಕ ವೇತನ 1100 ರೂ.ಗಳಿಂದ 2500 ರೂ.ಗಳವರೆಗೆ ಹೆಚ್ಚಿಸಬೇಕು.

ಎಲ್ಲ ಪಿಜಿ/ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಒದಗಿಸಬೇಕು. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನ ನೀಡುತ್ತಿದ್ದು, ಆದರೆ ನಮ್ಮ  ವಿಶ್ವವಿದ್ಯಾಲಯದಲ್ಲಿ ಮಾತ್ರ ಕೆಲವು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. 

Advertisement

ಆದ್ದರಿಂದ ಈ ವಿದ್ಯಾರ್ಥಿಗಳಿಗೂ ಕೂಡಾ ಮಾಸಿಕ ವೇತನವನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ಕವಿವಿ ಕುಲಪತಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸ್ವೀಕರಿಸಿದ ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಅವರು, ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡುವ ಕುರಿತಾಗಿ ಕೂಡಲೇ ಸಿಂಡಿಕೇಟ್‌ ಸಭೆ ಕರೆಯುವುದಾಗಿ ಮತ್ತು ವಿವಿಧ ಬೇಡಿಕೆಗಳನ್ನು ಕೂಡಲೇ ಬಗೆಹರಿಸುವುದಾಗಿ ಲಿಖೀತ ರೂಪದಲ್ಲಿಯೇ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. 

ಜಿಲ್ಲಾಧ್ಯಕ್ಷ ಶರಣು ಗೋನವಾರ, ರಣಜೀತ ಧೂಪದ, ಕಿರಣ ಮಾಳಗಿ,  ಶಿವಶರಣ ಪರಪ್ಪಗೋಳ, ಬಿ.ವಿ.ಎಸ್‌. ನ ಸದಾನಂದ, ಚೇತನ, ಜಗದೀಶ, ಶಿವು, ಸುದರ್ಶನ, ದುಂಡೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next