ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಆದೇಶ ಹಿಂಪಡೆದು ವಿದ್ಯಾರ್ಥಿಗಳ ಹಿತರಕ್ಷಣೆಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ನಗರದ ಡಾ| ಬಿ.ಆರ್. ಅಂಬೇಡ್ಕರ ವೃತ್ತದಿಂದ ಪ್ರಾರಂಭಗೊಂಡ ರ್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ ಮಾತನಾಡಿ, ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಸಿದಿದೆ.
ಈ ಸುತ್ತೋಲೆ ಅನ್ವಯ ಹಾಸ್ಟೆಲ್ ಪ್ರವೇಶ ಪಡೆಯಲು ಹಲವಾರು ನಿಬಂಧನೆಗಳನ್ನು ಹಾಕಲಾಗಿದೆ. ಇದು ವಿದ್ಯಾರ್ಥಿಗಳ ಹಿತರಕ್ಷಣೆಗೆ ಮಾರಕವಾಗಿದೆ. ಅದರಲ್ಲೂ ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಸುತ್ತೋಲೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಭೂ ಒಡೆತನದ ವಿಭಾಗದಲ್ಲಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು. ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಏಕಗವಾಕ್ಷಿ ಯೋಜನೆ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಯಂಗೊಳಿಸಬೇಕು. ರಾಜ್ಯಾದ್ಯಂತ ಅಂಬೇಡ್ಕರ ಯೋಜನೆಯ ಮನೆಗಳಿಗೆ ಸಂಬಂಧಿ ಸಿದಂತೆ ಬಿಲ್‌ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ತಾಳಿಕೋಟೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ ಅವರ ಮೂರ್ತಿ ಸ್ಥಾಪನೆಗೆ ಶೀಘ್ರದಲ್ಲಿಯೇ ಮುಂದಾಗಬೇಕು ಎಂದು ಸಂಘಟನೆ ಪದಾಧಿ ಕಾರಿಗಳು ಹಕ್ಕೊತ್ತಾಯ ಮಂಡಿಸಿದರು.
ದೇವೇಂದ್ರ ಹಾದಿಮನಿ, ರಾವುತ ತಳಕೇರಿ, ಚಂದ್ರಕಾಂತ ಸಿಂಗೆ, ಸಂತೋಷ ತಳಕೇರಿ, ಗುರು ಗುಡಿಮನಿ, ರಮೇಶ
ಚಲವಾದಿ, ಹಣಮಂತ ನಾಲತವಾಡ, ಚಂದ್ರಶೇಖರ ನಡಗೇರಿ, ಭುತ್ತಣ್ಣ ಚಲವಾದಿ, ಮಹೇಶ ಚಲವಾದಿ, ನಾಗೇಶ
ಕಟ್ಟಿಮನಿ, ದುಂಡಪ್ಪ ವಾಗಮೊರೆ, ತುಳಸಪ್ಪ ಬಾಣಿಕೋಲ, ರವಿ ಅಲಹಳ್ಳಿ, ಮಲಕಪ್ಪ ಕಟ್ಟಿಮನಿ, ಪರಸರಾಮ ಕಾಂಬಳೆ,
ಪಿ.ಡಿ. ಭೂತನಾಳ, ರವಿ ಭೂತನಾಳ, ಪವಾಡೆಪ್ಪ ಹೊಲ್ದೂರ, ಈಶ್ವರ ಚಲವಾದಿ, ಇಂದೂರ ಬೈರವಾಡಗಿ, ನಂದಾ ಗುನ್ನಾಪೂರ, ಪರಶರಾಮ ಕೂಡಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.