Advertisement

ಪಿಎಫ್‌ಐ, ಕೆಎಫ್‌ಡಿ ಸಂಘಟನೆ ನಿಷೇಧಿಸಿ

01:24 PM Aug 18, 2017 | Team Udayavani |

ಬಳ್ಳಾರಿ: ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಾಪ್ಯುಲರ್‌ ಫ್ರೆಂಟ್‌ ಆಫ್‌ ಇಂಡಿಯಾ (ಪಿಎಸ್‌ಐ) ಹಾಗೂ ಕೆಎಫ್‌ಡಿ(ಕರ್ನಾಟಕ ಪೋರಂ ಫಾರ್‌ ಡೆವೆಲಪ್‌ಮೆಂಟ್‌) ಸಂಘಟನೆಗಳನ್ನು ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ನಡೆಯುತ್ತಿರುವ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣಗಳಲ್ಲಿ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶಾಮೀಲಾಗಿರುವುದು ಸಾಬೀತಾಗಿದೆ. ಈ ಎರಡೂ 
ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿವೆ ಎನ್ನುವುದು ತಿಳಿದ ವಿಷಯ. ಸಿಮಿ ಸಂಘಟನೆಯ ಪದಾಧಿಕಾರಿಗಳೇ ಪಿಎಸ್‌ಐ, ಕೆಎಫ್‌ಡಿ ಸಂಘಟನೆಗಳಲ್ಲಿಯೂ ಪದಾಧಿಕಾರಿಗಳಾಗಿರುವುದು ಕಾನೂನಿಗೆ ಮಾಡಿದ ಅಣಕದಂತಿದೆ ಎಂದು ಆರೋಪಿಸಿದರು.

ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳು ನಿಷೇಧಿತ ಉಗ್ರಗಾಮಿಗಳ ಸಂಘಟನೆಗಳ ಜೊತೆಯಲ್ಲಿ ನಂಟು ಹೊಂದಿರುವುದು ಅನೇಕ ಭಯೋತ್ಪಾದಕ ಹಾಗೂ ಕಾನೂನು ವಿರೋಧಿ  ಚಟುವಟಿಕೆಗಳು, ದೇಶದ್ರೋಹದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಕೇರಳ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಲ್ಲಿಯೂ ಕೂಡ ತನ್ನ ಜಾಲವನ್ನು ವಿಸ್ತರಿಸಿಕೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳ ಧುರೀಣರ ಕೊಲೆ, ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುವುದು, ಶಾಂತಿ-ಸೌಹಾರ್ದತೆಗಳಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿವೆ ಎಂದು ದೂರಿದರು.

ಕಳೆದ 2011ರ ಜೂನ್‌ 8ರಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಸುಧೀಂದ್ರ ಮತ್ತು ವಿಘ್ನೇಶ್‌ ಎಂಬ ಯುವಕರ ಅಪಹರಣ ಪ್ರಕರಣ, 2012ರಲ್ಲಿ ಅಸ್ಸಾಂ ರಾಜ್ಯದಲ್ಲಿ ಗಲಭೆಗಳು ನಡೆದಾಗ ಬೆಂಗಳೂರಿನಲ್ಲಿರುವ ಪೂರ್ವಾಂಚಲ ರಾಜ್ಯದ ಜನರನ್ನು ಬೆದರಿಸುವ ಹಾಗೂ ಅವರನ್ನು ಬೆಂಗಳೂರಿನಿಂದ ಓಡಿಸುವ ಬಗ್ಗೆ ಪಾಕಿಸ್ತಾನದ ಮೂಲದಿಂದ ಬಂದಂತಹ ಬೆದರಿಕೆಯ ಸಂದೇಶಗಳನ್ನು (ಮಾಸ್‌ ಮೆಸೇಜ್‌) ಹರಿದು ಬಿಟ್ಟು, ಭಯದ ವಾತಾವರಣ ಮೂಡಿಸಿದ್ದು ಇದೇ ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಯವರು ಎಂಬುದು ಪೊಲೀಸ್‌ ತನಿಖೆಯಿಂದ ಬಟಾ
ಬಯಲಾಗಿತ್ತು ಎಂದು ಹೇಳಿದೆ. ಅಲ್ಲದೇ ಈಗ್ಗೆ 2 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಕೋಮುಗಲಭೆ ಹಾಗೂ ಇಬ್ಬರು ಹಿಂದೂ ಯುವಕರ ಹತ್ಯೆಯಲ್ಲಿ ಕೂಡ ಈ ಸಂಘಟನೆಗಳ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು. 

ಇತ್ತೀಚೆಗೆ ರಾಜ್ಯದ ವಿವಿಧೆಡೆ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸರಣಿ ಹತ್ಯೆಯಲ್ಲಿ ಉದಾಹರಣೆ ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್‌, ಮೂಡಬಿದ್ರಿಯ ಪ್ರಶಾಂತ್‌ ಪೂಜಾರಿ ಹತ್ಯೆ ಪ್ರಕರಣಗಳಲ್ಲಿ ಬಂಧಿತರಾದವರು ಈ ಸಂಘಟನೆಗಳ ಸಕ್ರಿಯ ಕಾರ್ಯಕರ್ತರೆಂಬುದಾಗಿಯೂ ತಿಳಿದು ಬಂದಿದೆ.

Advertisement

ಮಂಗಳೂರಿನ ಶರತ್‌ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿ ತನಾಗಿರುವ ಖಲೀಲ್‌ ಚಾಮರಾಜನಗರ ಜಿಲ್ಲೆಯ ಪಿಎಫ್‌ಐ ಧುರೀಣನಾಗಿದ್ದಾನೆ. ಇನ್ನೋರ್ವ ಆರೋಪಿ ಬಂಟ್ವಾಳದ ಅಬ್ದುಲ್‌ ಶಫಿ ಕೂಡ ಪಿಎಸ್‌ಐ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ ಎಂದು ದೂರಿದರು. ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿತ್ತಾದರೂ ಅದು  ಜಾರಿಗೆ ಬಂದಿಲ್ಲ, ಅಲ್ಲದೇ ಕೇರಳ ಸರ್ಕಾರವು 2012ರಲ್ಲಿ ಅಲ್ಲಿನ ಹೈಕೋರ್ಟ್‌ಗೆ ಸಲ್ಲಿಸಿದ ಅಫೆಡವಿಟ್‌ನಲ್ಲಿ ಪಿಎಫ್‌ಐ ಸಂಘಟನೆಯು ರಾಷ್ಟ್ರದ ಹಿತಕ್ಕೆ ಹಾನಿಕಾರಕ ಎಂದು ತಿಳಿಸಿದೆ. ಆದ್ದರಿಂದ ರಾಜ್ಯದಲ್ಲಿ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ಈ ಸಂಘಟನೆಗಳ ಬ್ಯಾಂಕ್‌ ಖಾತೆ, ಚರಾಸ್ತಿ, ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. 2008ರ ರಾಷ್ಟ್ರೀಯ ತನಿಖಾದಳದ ಕಾಯ್ದೆ ಸೆ.6ರ ಅನ್ವಯ ರಾಜ್ಯಲ್ಲಿ ಹಿಂದೂಗಳ ಮೇಲೆ ನಡೆದಿರುವ ಎಲ್ಲಾ ದಾಳಿ, ಹಲ್ಲೆ ಹಾಗೂ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದರು.

ಸಚಿವ ರೈ ರಾಜೀನಾಮೆ ನೀಡಬೇಕು:
ಸಮಾಜ ಘಾತುಕ ಸಂಘಟನೆಗಳಿಗೆ, ಕಾನೂನು ವಿರೋಧಿ  ಕೃತ್ಯಗಳಿಗೆ, ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಅರಣ್ಯ ಸಚಿವ ರಮಾನಾಥ ರೈ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಸಂಸದ ಬಿ.ಶ್ರೀರಾಮುಲು, ಯುವ ಮೋರ್ಚಾ
ಜಿಲ್ಲಾಧ್ಯಕ್ಷ ಜಿ.ಪ್ರಕಾಶ್‌ ರೆಡ್ಡಿ, ನಗರ ಅಧ್ಯಕ್ಷ ಕೆ.ಎಸ್‌.ಅಶೋಕ್‌ಕುಮಾರ್‌, ಬಿಜೆಪಿ ನಗರ ಅಧ್ಯಕ್ಷ ಶ್ರೀನಿವಾಸ್‌ ಮೋತ್ಕರ್‌, ಮುಖಂಡರಾದ
ಕೆ.ಎ.ರಾಮಲಿಂಗಪ್ಪ, ಎಸ್‌.ಗುರುಲಿಂಗನಗೌಡ, ಓಬಳೇಶ್‌, ಶಿವಕುಮಾರ್‌, ಮಲ್ಲೇಶ್‌ ಕುಮಾರ್‌, ಚಂದ್ರ, ಓಬಳೇಶ್‌ ರೆಡ್ಡಿ, ಸುಧಾಕರ್‌ ರೆಡ್ಡಿ, ರಾಜೇಶ್‌, ನೇಮಕಲ್‌ ರಾವ್‌, ಗಿರಿ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next